ಬೆಂಗಳೂರು: ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ (ಜಾತಿ ವರದಿ) ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜೂನ್ 6ರ ವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಕ್ರಮ ಆಗುವುದಿಲ್ಲ ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ್ ಆಯೋಗದ ಅಂಕಿ - ಅಂಶಗಳನ್ನು ಆಧರಿಸಿ ಸಿದ್ದಪಡಿಸಲಾದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಆಕ್ಷೇಪಿಸಿ ಸಮಾಜ ಸಂಪರ್ಕ ವೇದಿಕೆ (ರಿ) ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್, ಆಯೋಗದ ಅವಧಿ ಮುಗಿದ ಹಿನ್ನೆಲೆ ಸರ್ಕಾರ ವರದಿ ಸ್ವೀಕರಿಸಿದೆ. ಚುನಾವಣೆ ಘೋಷಣೆಯಾಗುವ ಸಾಕಷ್ಟು ಮುಂಚೆ ವರದಿ ಸಲ್ಲಿಸಲಾಗಿದೆ. ಚುನಾವಣೆ ಘೋಷಣೆಗೂ, ಚುನಾವಣೆ ಜರುಗುವುದಕ್ಕೂ ವರದಿಯನ್ನು ಸರ್ಕಾರ ಸ್ವೀಕರಿಸುವುದಕ್ಕೂ ಸಂಬಂಧವಿಲ್ಲ. ಈಗ ಆತುರ ಮಾಡುತ್ತಿರುವ ಅರ್ಜಿದಾರರು 2014ರಲ್ಲಿ ತಿದ್ದುಪಡಿಯಾದ ಕಾಯ್ದೆಯನ್ನು 2024ರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರ. ನೀತಿ ಸಂಹಿತೆ ಜಾರಿ ಇರುವಾಗ ಸಚಿವ ಸಂಪುಟ ಸಭೆ ನಡೆಸಲಾಗುವುದಿಲ್ಲ. ಹೀಗೆ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಜೂನ್ 6ರವರೆಗೆ ಸರ್ಕಾರದಿಂದ ಯಾವ ಕ್ರಮವೂ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಜನಗಣತಿ ಕಾಯ್ದೆಯಡಿ ಗಣತಿ ಮಾಡಲಾಗಿದೆಯೇ ಅನ್ನುವುದು ಇಲ್ಲಿರುವ ಪ್ರಶ್ನೆ. ಆದರೆ, ಅದು ಕೇಂದ್ರ ಸರ್ಕಾರದ ವ್ಯಾಪ್ತಿ ಹಿಂದುಳಿದ ವರ್ಗಗಳ ಆಯೋಗ ಜನಗಣತಿ ನಡೆಸಿಲ್ಲ. 54 ಅಂಶಗಳನ್ನು ಆಧರಿಸಿ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ.