ಬೆಂಗಳೂರು:ಶಿರೂರಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಇತ್ತೀಚಿಗೆ ಸಂಭವಿಸಿದ ಗುಡ್ಡ ಕುಸಿದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದವರ ಪೈಕಿ 8 ಜನರ ಮೃತದೇಹಗಳು ದೊರೆತಿದ್ದು, ರಕ್ಷಣಾ ಕಾರ್ಯ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.
ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪತ್ತೆ, ಹೆದ್ದಾರಿಯಲ್ಲಿ ಬಿದ್ದಿರುವ ಕಲ್ಲು-ಮಣ್ಣು ತೆರವುಗೊಳಿಸಲು 24 ಗಂಟೆಗಳ ಕಾಲವೂ ನಿರಂತರವಾಗಿ ಸಾಧ್ಯವಿರುವ ಎಲ್ಲಾ ಕ್ರಮ ಜರುಗಿಸಬೇಕು. ಸೇನಾಪಡೆಗಳನ್ನು ನಿಯೋಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ನಗರದ ವಕೀಲರಾದ ಸಿ.ಜಿ.ಮಲೈಯಿಲ್ ಮತ್ತು ಕೆ.ಎಸ್.ಸುಭಾಷ್ ಚಂದ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟಿರ್ ಜನರಲ್ ಕೆ.ಅರವಿಂದ ಕಾಮತ್ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಒದಗಿಸಿದರು. ಮಣ್ಣಿನಡಿ ಸಿಲುಕಿರುವವರ ಪತ್ತೆ ಹಾಗೂ ರಕ್ಷಣೆಗೆ ಕಳೆದ 24 ಗಂಟೆಯಲ್ಲಿ ಕೈಗೊಂಡ ಕ್ರಮಗಳ ವಿವರ ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈವರೆಗೆ ಎಂಟು ಶವಗಳು ಪತ್ತೆಯಾಗಿವೆ. ಉಳಿದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.