ಕರ್ನಾಟಕ

karnataka

ETV Bharat / state

ಬರಗಾಲಕ್ಕೆ ನೀರಿಲ್ಲದೇ ಒಣಗುತ್ತಿರುವ ಅಡಕೆ ತೋಟಗಳು: ಚಿಕ್ಕಮಗಳೂರು ರೈತರು ಕಂಗಾಲು - Dry areca nut plantations

ನೀರಿಲ್ಲದೇ ಒಣಗುತ್ತಿರುವ ತೆಂಗು ಹಾಗೂ ಅಡಕೆ ತೋಟಗಳಿಂದ ಕಂಗಾಲಾಗಿರುವ ರೈತರ ಕಡೆಗೆ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಚಿಕ್ಕಮಗಳೂರು ರೈತರು ಮನವಿ ಮಾಡಿಕೊಂಡಿದ್ದಾರೆ.

Dry areca nut plantations
ಬರಗಾಲಕ್ಕೆ ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟಗಳು

By ETV Bharat Karnataka Team

Published : Mar 9, 2024, 5:42 PM IST

ಬರಗಾಲಕ್ಕೆ ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟಗಳು

ಚಿಕ್ಕಮಗಳೂರು:ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಕೆ ಬೆಳೆ. ಸಾವಿರಾರು ಹೆಕ್ಟೇರ್​ನಲ್ಲಿ ಅಡಕೆ ಬೆಳೆದು ಬದುಕು ಸಾಗಿಸುತ್ತಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ- ಹಸಿರಿನಿಂದ ರಾರಾಜಿಸುತ್ತಿದ್ದ ಅಡಕೆ ಮರಗಳೀಗ ನೀರಿಲ್ಲದೇ ಒಣಗಿ ನಿಲ್ಲುತ್ತಿವೆ. ಬೋರ್​ವೆಲ್​ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ. ಅತ್ತ ಮಳೆ ಇಲ್ಲ. ಇತ್ತ ನೆಲದಲ್ಲಿ ನೀರಿಲ್ಲ. ಹೇಗಿದೆ ಗೊತ್ತಾ ಕಾಫಿನಾಡು ಕಡೂರಿನ ಅಡಕೆ ತೋಟದ ಪರಿಸ್ಥಿತಿ.

ಹೌದು, ಈ ತೋಟದ ಸ್ಥಿತಿ ನೋಡಿ. ಇದು ಐದು ವರ್ಷದ ಅಡಕೆ ತೋಟದ ಪರಿಸ್ಥಿತಿ. ಬೆಳೆಗಾರರು ಹೊಟ್ಟೆ-ಬಟ್ಟೆ ಕಟ್ಟಿ ಬೆಳೆಸಿದ್ದ ಅಡಕೆ ತೋಟ ಇಂದು ನೀರಿಲ್ಲದೇ ಒಣಗುತ್ತಿವೆ. ಕಡೂರಿನ ತೆಂಗಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಡೂರು ತಾಲೂಕಿನಲ್ಲಿ 49 ಸಾವಿರ ಹೆಕ್ಟೇರ್​ನಲ್ಲಿ ತೆಂಗು ಬೆಳೆದಿದ್ದರೆ, 27 ಸಾವಿರ ಹೆಕ್ಟೇರ್​ನಲ್ಲಿ ಅಡಕೆ ಬೆಳೆದಿದ್ದಾರೆ. 2018 ರಿಂದ 23 ರವರೆಗೆ ಸಮೃದ್ಧ ಮಳೆಯಾಗಿ ತೋಟಗಳು ಚೆನ್ನಾಗಿದ್ದವು. ಆದರೆ, 2023ರ ಮಳೆಗಾಲ ಸಂಪೂರ್ಣ ಕೈ ಕೊಟ್ಟ ಕಾರಣ, ಒಂದೇ ವರ್ಷಕ್ಕೆ ತೋಟಗಳು ಒಣಗಿ ನಿಂತಿವೆ.

ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರಲ್ಲಿ ಅಲ್ಪ ಮಳೆಯಾದರೂ ರಾಗಿ, ಹತ್ತಿ, ಜೋಳ ಬಿಟ್ಟರೆ ಹೆಚ್ಚಾಗಿ ತೆಂಗು - ಅಡಕೆಯನ್ನೇ ಬೆಳೆಯುತ್ತಿದ್ದರು. ಆದರೆ ಈಗ, ಮಳೆ ಇಲ್ಲದೇ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಬೋರ್ ಇದ್ದವರು ಹೇಗೋ ಇಷ್ಟು ದಿನ ಆಗೊಮ್ಮೆ- ಈಗೊಮ್ಮೆ ನೀರು ಹಾಯಿಸಿ ಬದುಕಿಸಿಕೊಂಡಿದ್ದ ಮರಗಳೀಗ ನೆಲ ಕಾಣುವ ಹಂತಕ್ಕೆ ಬಂದಿವೆ. ಬಿಸಿಲ ಝಳಕ್ಕೆ ಮರಗಳ ಚಿಗುರುಗಳೇ ಒಣಗುತ್ತಿವೆ.

ಕೇವಲ ಕಡೂರಿನಲ್ಲಷ್ಟೇ ಅಲ್ಲದೆ, ಚಿಕ್ಕಮಗಳೂರು ತಾಲೂಕಿನ ಬಯಲು ಸೀಮೆಯ ಕಳಸಾಪುರ, ಬೆಳವಾಡಿ, ಲಕ್ಯಾ, ತರೀಕೆರೆ, ಅಜ್ಜಂಪುರ, ಶಿವನಿ ಭಾಗದಲ್ಲೂ ಹೆಚ್ಚಾಗಿ ಅಡಿಕೆ ಬೆಳೆಯುತ್ತಾರೆ. ಚೈನ್‍ ಲಿಂಕ್‍ನಂತೆ ಒಂದು ವೃತ್ತಿಗೆ ಮತ್ತೊಂದು ಸಂಬಂಧಿಸಿರುವುದರಿಂದ ತೆಂಗು - ಅಡಕೆ ಮರಗಳು ನಾಶವಾದರೆ ಸ್ವ-ಉದ್ಯೋಗ ಮಾಡುವ ಮತ್ತಷ್ಟು ಮಂದಿ ಬೀದಿಗೆ ಬೀಳುವ ಸಾಧ್ಯತೆ ಇದೆ. ಅಲ್ಪ ಮಳೆಯಾದರೂ ಸಾಕು ಅಂತ ಕಳೆದ ಬಾರಿ ಕಡೂರಿನಲ್ಲಿ ಸುಮಾರು 4,500 ಹೆಕ್ಟೇರ್​ನಲ್ಲಿ ಹೊಸದಾಗಿ ಅಡಕೆ ಬೆಳೆದಿದ್ದಾರೆ.

ಆದರೆ, ಒಂದೇ ವರ್ಷಕ್ಕೆ ಮಳೆ ಇಲ್ಲದೆ ಬೆಳೆಗಳು ನಾಶವಾದರೆ ಬೆಳೆಗಾರರು ಸಾಲಗಾರ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವ ಹಾಗಾಗಿದೆ. ಹಾಗಾಗಿ, ಸರ್ಕಾರ ಕೂಡಲೇ ಅಡಕೆ-ತೆಂಗು ಬೆಳೆಗಾರರ ಬದುಕಿನತ್ತ ಗಮನ ಹರಿಸಬೇಕಿದೆ. ದಿನದಿಂದ ದಿನಕ್ಕೆ ತೋಟಗಳು ನಾಶವಾಗ್ತಿರೋ ಸಂಖ್ಯೆಯೇ ಹೆಚ್ಚಾಗಿದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ ಏಪ್ರಿಲ್-ಮೇನಲ್ಲಿ ಬೆಳೆಗಾರರನ್ನು ದೇವರೇ ಕಾಪಾಡಬೇಕು.

ಒಟ್ಟಾರೆಯಾಗಿ, ಮುಗಿಲೆತ್ತರದ ಮರಗಳು ನೆಲ ಕಾಣ್ತಿರೋದಕ್ಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಒಂದೆಡೆ ಮಳೆ ಅಭಾವ, ಮತ್ತೊಂದೆಡೆ ಇದ್ದ ಬೋರ್​ವೆಲ್​ಗಳಲ್ಲಿ ನೀರಿಲ್ಲ. 800 - 1,000 ಅಡಿ ಆಳಕ್ಕೆ ಕೊರೆದರೂ ನೀರು ಬರ್ತಿಲ್ಲ. ಇದು ಕೂಡ ಬೆಳೆಗಾರರನ್ನು ಮತ್ತುಷ್ಟು ಸುಡುತ್ತಿದೆ. ಕೂಡಲೇ ಸರ್ಕಾರ ಅಡಕೆ-ತೆಂಗು ಬೆಳೆಗಾರರ ಸಹಾಯಕ್ಕೆ ಬಾರದಿದ್ದರೆ ಅಡಕೆ ಬೆಳೆಗಾರರ ಬದುಕು ಮತ್ತಷ್ಟು ಶೋಚನೀಯ ಸ್ಥಿತಿಗೆ ತಲುಪುವುದು ಗ್ಯಾರಂಟಿ.‌

ಇದನ್ನೂ ಓದಿ:ನೀರಿನ ಸಮಸ್ಯೆ: ಹೆಚ್ಚು ನೀರು ಬಳಸಿದರೆ ದಂಡ ವಿಧಿಸಲು ಮುಂದಾದ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳು

ABOUT THE AUTHOR

...view details