ಕರ್ನಾಟಕ

karnataka

ETV Bharat / state

ಹಾವೇರಿ: ನದಿ ತೀರದ ಗ್ರಾಮದಲ್ಲೇ ಕುಡಿಯುವ ನೀರಿಗೆ ಹಾಹಾಕಾರ; ಗುಂಡಿ ತೋಡಿ ಜಲ ಸಂಗ್ರಹಿಸುತ್ತಿರುವ ಜನ - ಹಾವೇರಿ

ಹಾವೇರಿ ತಾಲೂಕಿನ ಹಾವನೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ;
ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ;

By ETV Bharat Karnataka Team

Published : Feb 13, 2024, 6:34 PM IST

Updated : Feb 13, 2024, 7:52 PM IST

ಗುಂಡಿ ತೋಡಿ ಜಲ ಸಂಗ್ರಹಿಸುತ್ತಿರುವ ಜನ

ಹಾವೇರಿ:ಇಲ್ಲಿಯಹಾವನೂರು ಗ್ರಾಮದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದ ಪಕ್ಕದಲ್ಲಿ ಹಾದುಹೋಗಿರುವ ತುಂಗಭದ್ರ ನದಿಯ ಒಡಲು ಕೂಡ ಬರಿದಾಗಿದ್ದು, ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ನದಿ ತಟದಲ್ಲಿರುವ ಹಾವನೂರು ಗ್ರಾಮದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ. ಅಲ್ಲದೇ ನೀರಿಲ್ಲದೆ ಗ್ರಾಮದಲ್ಲಿರುವ ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುವುದು ಕಡಿಮೆಯಾಗಿದೆ. ಇನ್ನು, ನೀರು ಸರಬರಾಜು ಕೂಡ ಎರಡು ಮೂರು ದಿನಕ್ಕೊಮ್ಮೆ ಆಗುತ್ತಿದ್ದು, ಸಮಸ್ಯೆ ಎದುರಾಗಿದೆ. ಹಾಗಾಗಿ ಗ್ರಾಮದ ಜನರು ನದಿಯ ತಟದಲ್ಲಿ ಗುಂಡಿಗಳನ್ನು ತೆಗೆದು ನೀರು ಸಂಗ್ರಹಿಸುವಂತಾಗಿದೆ. ಬೆಳಗಾಗುತ್ತಿದ್ದಂತೆ ಬಿಂದಿಗೆಗಳನ್ನು ಹಿಡಿದು ನದಿಯ ತಟಕ್ಕೆ ಬರುವ ಗ್ರಾಮಸ್ಥರು ನದಿ ದಂಡೆಯಲ್ಲಿನ ಭೂಮಿ ಅಗೆದು ನೀರನ್ನು ಕೊಂಡೊಯ್ಯುತ್ತಿದ್ದಾರೆ.

ಕೆಲವರು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರನ್ನು ತಂದುಕೊಳ್ಳುತ್ತಿದ್ದಾರೆ. ಆದರೆ ಈ ನೀರಿನಿಂದ ಅಡುಗೆ ರುಚಿಯಾಗುವುದಿಲ್ಲಾ. ಹಾಗಾಗಿ ಶುದ್ಧ ಘಟಕದ ನೀರು ಬಳಸಲ್ಲ ಎಂದು ಗ್ರಾಮದ ಕೆಲವರು ಗುಂಡಿ ತೆಗೆದು ನೀರು ಸಂಗ್ರಹಿಸುತ್ತಿದ್ದಾರೆ.

ಈ ಬಗ್ಗೆ ಗ್ರಾಮಸ್ಥ ಭೀಮಪ್ಪ ಎಂಬುವರು ಈಟಿವಿ ಭಾರತದೊಂದಿಗೆ ಮಾತನಾಡಿ, ಕಳೆದ ಎರಡು ಮೂರು ತಿಂಗಳಿನಿಂದಲೇ ಸಮಸ್ಯೆ ಎದುರಾಗಿದೆ. ಸರಿಯಾದ ಪ್ರಮಾಣದಲ್ಲಿ ನೀರು ಸಿಗದಿರುವುದರಿಂದ ಧನ, ಕರುಗಳಿಗೂ ತೊಂದರೆಯಾಗುತ್ತಿದೆ. ಜತೆಗೆ ನೀರು ಇಲ್ಲದೇ ಬೆಳೆಗಳು ಸಹ ಒಣಗಿವೆ ಎಂದು ತಿಳಿಸಿದರು.

ಗ್ರಾಮಸ್ಥೆ ದ್ಯಾಮಕ್ಕ ಎಂಬುವರು ಮಾತನಾಡಿ, ನೀರಿನ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ ಗುಂಡಿ ಅಗೆದು ನೀರು ತೆಗೆದುಕೊಂಡು ಬರುವುದರಿಂದ ಹೆಚ್ಚಿನ ಸಮಯ ಹಿಡಿಯುತ್ತದೆ. ಇದರಿಂದ ಮನೆಯ ಕೆಲಸಗಳು ಅರ್ಧಕ್ಕೆ ನಿಲ್ಲುತ್ತಿವೆ. ಮತ್ತೊಂದೆಡೆ ಎರಡು ದಿನಕ್ಕೊಮ್ಮೆ ಗ್ರಾಮಕ್ಕೆ ಕುಡಿಯವ ನೀರು ಸರಬರಾಜು ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ವರ್ಷ ಬರಗಾಲದಿಂದ ನದಿ ಬೇಗನೆ ಬತ್ತಿಹೋಗಿದೆ. ನದಿಯಲ್ಲಿ ಗುಂಡಿಗಳಲ್ಲಿ ನಿಂತ ನೀರು ಕೂಡ ಕಲುಷಿತವಾಗಿದ್ದು, ಕೆಟ್ಟವಾಸನೆ ಬರುತ್ತಿದೆ. ಜೊತೆಗೆ ಹುಳುಗಳಿಂದ ಕೂಡಿದ್ದು ದನಗಳು ಸಹ ಆ ನೀರು ಕುಡಿಯಲು ಹಿಂದೇಟು ಹಾಕುತ್ತವೆ. ಹೀಗಾಗಿ ಗುಂಡಿ ಅಗೆದು ನೀರು ತರಲಾಗುತ್ತದೆ. ಸರ್ಕಾರ ನಮ್ಮಂತಹ ಜನರಿಗೆ ಕುಡಿಯುವ ನೀರು ಪೂರೈಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲಾ ಮಳೆಗಾಲದಲ್ಲಿ ನದಿಯಲ್ಲಿ ನೀರು ಇದ್ದಾಗ ಮಾತ್ರ ಉಪಯೋಗಕ್ಕೆ ಬರುತ್ತವೆ. ಈ ರೀತಿ ನದಿ ಒಣಗಿದ ಮೇಲೆ ಕುಡಿಯುವ ನೀರಿಗಾಗಿ ನಾವು ಅಲೆದಾಡುವುದು ತಪ್ಪುವುದಿಲ್ಲಾ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ವಿಜಯಪುರ: ಬೇಸಿಗೆ ಮುನ್ನವೇ ಬತ್ತಿದ ಭೂತನಾಳ ಕೆರೆ, ನೀರಿಗಾಗಿ ಜನರ ಹಾಹಾಕಾರ

Last Updated : Feb 13, 2024, 7:52 PM IST

ABOUT THE AUTHOR

...view details