ಕರ್ನಾಟಕ

karnataka

ETV Bharat / state

ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ: ಡಾ.ಶರಣ ಪ್ರಕಾಶ್ ಪಾಟೀಲ್ - Dr Sharan Prakash Patil

ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

Dr Sharan Prakash Patil
ಡಾ.ಶರಣ ಪ್ರಕಾಶ್ ಪಾಟೀಲ್ (ETV Bharat)

By ETV Bharat Karnataka Team

Published : Aug 23, 2024, 8:30 PM IST

ಬೆಂಗಳೂರು:ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹಿಳಾ ವೈದ್ಯಕೀಯ ಸಿಬ್ಬಂದಿ ಹಾಗೂ ಮಹಿಳಾ ವೈದ್ಯರ ಸುರಕ್ಷತೆಗಾಗಿ ಸ್ವಯಂಪ್ರೇರಿತವಾಗಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ವಿಕಾಸಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರರಾದ ಡಾ.ಸುಜಾತ ರಾಥೋಡ್ ಅವರಿಗೆ ಮಹಿಳಾ ವೈದ್ಯರ ಸುರಕ್ಷತೆಯ ಬಗ್ಗೆ ಸಂಬಂಧಿಸಿದ ಎಲ್ಲಾ ಸಂಸ್ಥೆಗಳು/ಪಾಲುದಾರರನ್ನು ಸಂಪರ್ಕಿಸಿ, ಸಮಗ್ರವಾದ ಮಾರ್ಗಸೂಚಿಯನ್ನು ರಚಿಸುವಂತೆ ಸೂಚಿಸಿದರು.

ಡಾ.ರಾಥೋಡ್ ಅವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಲ್ಲಾ ನಿರ್ದೇಶಕರುಗಳು, ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವೈದ್ಯರ ಸಂಘ ಸಂಸ್ಥೆಗಳೊಂದಿಗೆ ಸಮಾಲೋಚಿಸಲು ನಿರ್ದೇಶನ ನೀಡಿದರು. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು, ಮಹಿಳಾ ವೈದ್ಯರು ಇನ್ನಿತರೆ ಪಾಲುದಾರರೊಂದಿಗೆ ಸಮಾಲೋಚಿಸಿ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ವಿಶೇಷವಾಗಿ ಮಹಿಳಾ ವೈದ್ಯರ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸುವಂತೆ ಒತ್ತಿ ಹೇಳಿದರು.

ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯರ ಸುರಕ್ಷತೆಗಾಗಿ ವೈದ್ಯಕೀಯ ಸಮುದಾಯದ ಸಲಹೆ ಸೂಚನೆಗಳಂತೆ ರಾಜ್ಯ ಸರ್ಕಾರವು ಶೀಘ್ರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಈ ಮಾರ್ಗಸೂಚಿಗಳು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನ್ವಯವಾಗುತ್ತವೆ ಎಂದು ಸಚಿವರು ತಿಳಿಸಿದರು.

ಕೊಲ್ಕತ್ತಾದ ಆರ್​​ಜಿಕರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ವೈದ್ಯೆ ಮೇಲೆ ನಡೆದ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ ಸ್ವತಃ ವೈದ್ಯರಾದ ಡಾ.ಪಾಟೀಲರು ವೃತ್ತಿಪರ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ ಮತ್ತು ಮಹಿಳಾ ವೈದ್ಯರ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ಪರಿಷ್ಕರಣೆ ಮುಷ್ಕರ ಕೈಬಿಟ್ಟ ವಿದ್ಯಾರ್ಥಿಗಳು: ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಸೀನಿಯರ್ ರೆಸಿಡೆಂಟ್ ವೈದ್ಯರುಗಳ ಶಿಷ್ಯವೇತನ (ಸ್ಟಿಪೆಂಡ್)ವನ್ನು ಶೇ. 25ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಸ್ಟೈಫಂಡ್ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆನೀಡಿದ್ದರು. ಪರಿಷ್ಕೃತ ವೇತನ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದ್ದು, ಶೇ.25 ರಷ್ಟು ಹೆಚ್ಚಳವಾಗಲಿದೆ. ಸರ್ಕಾರ ಶಿಷ್ಯವೇತನ ಹೆಚ್ಚಳ ಮಾಡಿದ ಬೆನ್ನಲ್ಲೇ ವೈದ್ಯರು ಮುಷ್ಕರನ್ನು ಹಿಂಪಡೆದಿದ್ದಾರೆ. ಪರಿಷ್ಕೃತ ವೇತನ, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು, ಕೋರ್ಸ್‍ಗಳು, ಹಾಗು ಮಾಸಿಕ ವೇತನ ಹೀಗಿದೆ.

1ನೇ ವರ್ಷ – ರೂ. 45,000 ದಿಂದ 56,250
2ನೇ ವರ್ಷ- ರೂ. 50,000 ದಿಂದ 62,500
3ನೇ ವರ್ಷ- ರೂ. 55,000 ದಿಂದ 68,750

ಇನ್ನು, ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು, ಕೋರ್ಸ್‍ಗಳ, ಮತ್ತು ಮಾಸಿಕ ವೇತನ ಹೀಗಿದೆ.

1ನೇ ವರ್ಷ - ರೂ. 55,000 ದಿಂದ 68,750
2ನೇ ವರ್ಷ- ರೂ. 60,000 ದಿಂದ 75,000
3ನೇ ವರ್ಷ- ರೂ. 65,000 ದಿಂದ 81,250
ಸೀನಿಯರ್ ರೆಸಿಡೆಂಟ್ಸ್ - ರೂ. 60,000 ದಿಂದ 75,000

ಮಂಜೂರಾದ ಸೀಟುಗಳು:
ಸ್ನಾತಕೋತ್ತರ- 3,540
ಸೂಪರ್ ಸ್ಪೆಷಾಲಿಟಿ- 445
ಸೀನಿಯರ್ ರೆಸಿಡೆಂಟ್- 527
ಒಟ್ಟು- 4,312 ಸೀಟುಗಳು

ಇದನ್ನೂ ಓದಿ:ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್‌ ಪಾಟೀಲ್​ - Sharan Prakash Patil

ABOUT THE AUTHOR

...view details