ಹುಬ್ಬಳ್ಳಿ:ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮವೂ ಕಳೆಕಟ್ಟಿದೆ. ಬಗೆ ಬಗೆಯ ಆಕಾಶಬುಟ್ಟಿ, ಬಣ್ಣ ಬಣ್ಣದ ಲೈಟಿಂಗ್ಸ್, ದೇವರ ಪೂಜಾ ಸಾಮಗ್ರಿಗಳು ಗಮನ ಸೆಳೆಯುತ್ತಿವೆ. ಇವುಗಳ ಜೊತೆಗೆ ತಮಿಳುನಾಡಿನಿಂದ ಬಂದಿರುವ ವಿವಿಧ ಬಗೆಯ ಮಣ್ಣಿನ ಹಣತೆಗಳು ಕೂಡ ಗ್ರಾಹಕರನ್ನು ಕೇಂದ್ರೀಕರಿಸುತ್ತಿವೆ.
ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ಪ್ರತಿವರ್ಷಂತೆ ಈ ವರ್ಷವೂ ತಮಿಳುನಾಡಿನ ಕೋಯಿಮತ್ತೂರು, ಮಧುರೈ, ಚೆನ್ನೈನಿಂದ ರಾಜ್ಯದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ 60 ಲಕ್ಷಕ್ಕೂ ಅಧಿಕ ಬಗೆ ಬಗೆಯ ಹಣತೆಗಳು ಲಗ್ಗೆ ಇಟ್ಟಿವೆ.
ಮೊದಲೆಲ್ಲ ಮಣ್ಣಿನಿಂದ ತಯಾರಿಸಿದ ಮಣ್ಣಿನ ಹಣತೆಗಳಿಗೆ ಭಾರೀ ಬೇಡಿಕೆ ಇತ್ತು. ಆದ್ರೆ ಈಗ ಈ ಭಾಗದಲ್ಲಿ ಮಣ್ಣಿನ ಹಣತೆ ತಯಾರಿಸುವವರ ಸಂಖ್ಯೆ ಸಂಪೂರ್ಣವಾಗಿ ಕ್ಷೀಣಿಸಿದೆ. ಸ್ಥಳೀಯವಾಗಿ ತಯಾರಿಸುವ ಮಣ್ಣಿನ ಹಣತೆಗಳಿಗೂ ತಮಿಳುನಾಡಿನಿಂದ ಆಗಮಿಸುವ ಹಣತೆಗಳಿಗೂ ವ್ಯತ್ಯಾಸವಿದೆ. ಸ್ಥಳೀಯವಾಗಿ ಸಾಮಾನ್ಯ ಮಣ್ಣಿನಲ್ಲಿ ತಯಾರಿಸಿದ ಹಣತೆ ದೊರೆತರೆ, ತಮಿಳುನಾಡಿನಿಂದ ಬಂದಿರುವ ಹಣತೆಯನ್ನು ಹೆಂಚು ತಯಾರಿಕೆಗೆ ಬಳಸುವ ಮಣ್ಣಿನಿಂದ ಸಿದ್ಧಪಡಿಸಲಾಗುತ್ತದೆ. ಇವು ಸಾಮಾನ್ಯ ಮಣ್ಣಿಗಿಂತ ಹೆಚ್ಚು ಬಾಳಿಕೆ ಬರುವುದರಿಂದ ಇವುಗಳಿಗೆ ಬೇಡಿಕೆಯೂ ಸಹ ಹೆಚ್ಚಾಗಿದೆ. ಅದೇ ಕಾರಣಕ್ಕೆ ಈ ಸಲ ಭಾರಿ ಪ್ರಮಾಣದಲ್ಲಿ ಮಣ್ಣಿನ ಹಣತೆಗಳು ಮಾರುಕಟ್ಟೆ ಪ್ರವೇಶಿಸಿವೆ.
ಯುಗಾದಿ ಸಂಭ್ರಮ ಮುಗಿಯುತ್ತಿದ್ದಂತೆ ದೀಪಾವಳಿಗೆ ಬೇಕಾಗುವ ಹಣತೆ ತಯಾರಿಸುವುದು ವಾಡಿಕೆ. ಅದರಂತೆ ವಿವಿಧ ಶೈಲಿಯ ಹಣತೆ ಸಿದ್ಧಪಡಿಸಲಾಗಿದೆ. ಹುಬ್ಬಳ್ಳಿ ಸೇರಿದಂತೆ ದೊಡ್ಡ ದೊಡ್ಡ ನಗರಗಳಿಗೆ ಈಗಾಗಲೇ ಲಾರಿಗಳ ಮೂಲಕ ಸರಬರಾಜು ಮಾಡಲಾಗಿದ್ದು, ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ. ಇಲ್ಲಿನ ಬಿಡಿ ಹಾಗೂ ಚಿಕ್ಕಪುಟ್ಟ ವ್ಯಾಪಾರಿಗಳು ಅವುಗಳನ್ನು ಖರೀದಿಸಿ ಹೋಲ್ಸೇಲ್ ದರದಲ್ಲಿ ಸದ್ಯ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತಮಿಳುನಾಡು ಹಣತೆಗಳ ಮಾರಾಟ ಜೋರಾಗಿ ನಡೆಯುತ್ತಿದೆ.