ದಾವಣಗೆರೆ :ಅವರು ಅನಾಥೆಯರು, ಸಂತ್ರಸ್ತೆಯರು, ರಾಜ್ಯ ಮಹಿಳಾ ನಿಲಯದಲ್ಲಿ ಬದುಕು ಕಟ್ಟಿಕೊಂಡವರು. ತಂದೆ ತಾಯಿ ಇಲ್ಲದೆಯೂ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರು. ಸಂತಸದ ವಿಚಾರ ಏನಂದ್ರೆ ಅನಾಥ ಹೆಣ್ಣುಮಕ್ಕಳಿಗೆ ದಾವಣಗೆರೆ ಜಿಲ್ಲಾಡಳಿತ ಆಸರೆಯಾಗಿದೆ. ಅನಾಥೆಯರ ಬಾಳಿನಲ್ಲಿ ಬೆಳಕಾಗಿ ಬಂದ ಯುವಕನಿಗೆ ದಾವಣಗೆರೆ ಜಿಲ್ಲಾಡಳಿತ ಸಂವಿಧಾನದ ಪ್ರಸ್ತಾವನೆ ಓದಿಸಿ, ಮಂತ್ರ ಮಾಂಗಲ್ಯದಡಿಯಲ್ಲಿ ಮದುವೆ ಮಾಡಿಸಿದೆ. ಇಲ್ಲಿಯ ತನಕ ಒಟ್ಟು 43 ಮದುವೆಗಳನ್ನು ಮಾಡಿಸಿ, ಇಡೀ ರಾಜ್ಯದಲ್ಲಿ ದಾಖಲೆ ನಿರ್ಮಿಸಿದೆ.
ಬೆಣ್ಣೆನಗರಿ ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿಂದು ಈ ಮದುವೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಜಿಲ್ಲಾಡಳಿತದ ಸಮ್ಮುಖದಲ್ಲಿ ಇಲ್ಲೊಂದು ವಿಶೇಷ ಮದುವೆ ನೆರವೇರಿತು. ತಂದೆ ತಾಯಿಯನ್ನು ಕಳೆದುಕೊಂಡಿದ್ದ ದಿವ್ಯಾ (24 ವರ್ಷ) ಎಂಬುವವರು ನಗರದ ಹೊರವಲಯದಲ್ಲಿರುವ ರಾಮನಗರದ ರಾಜ್ಯ ಮಹಿಳಾ ನಿಲಯದಲ್ಲಿ ಸೇರಿದ್ದರು.
ಹುಟ್ಟು ಅನಾಥೆಯಾಗಿರುವ ದಿವ್ಯಾ ದಾವಣಗೆರೆ ನಗರದ ರಾಮನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಇಲಾಖೆಯ ರಾಜ್ಯ ಮಹಿಳಾ ನಿಲಯಕ್ಕೆ ತುಮಕೂರಿನಿಂದ ವರ್ಗಾವಣೆಗೊಂಡಿದ್ದರು. ಮದುವೆ ವಯಸ್ಸಿಗೆ ಬಂದ ಹಿನ್ನೆಲೆ ಮದುವೆ ಮಾಡಿಸಬೇಕಾಗಿ ಬಂದಿತ್ತು. ಈಗ ದಿವ್ಯಳ ಬಾಳಲ್ಲಿ ಚಿತ್ರದುರ್ಗದ ಮುದ್ಲಾಪುರ ಗ್ರಾಮದ ಟಿ. ನಾಗರಾಜ್ ಬೆಳಕಾಗಿ ಬಂದಿದ್ದಾರೆ.
ವರನ ಹಿನ್ನೆಲೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಎಲ್ಲಾ ಸರಿ ಎಂದು ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಜಿಲ್ಲಾಡಳಿತದ ಅನುಮತಿ ಪಡೆದು, ಈ ಇಬ್ಬರ ಸಂಬಂಧಿಕರೊಂದಿಗೆ ಮಾತನಾಡಿದರು. ಅವರ ಒಪ್ಪಿಗೆ ಮೇರೆಗೆ ಇಂದು ಮಹಿಳಾ ನಿಲಯದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯದಡಿಯಲ್ಲಿ ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್, ಮಹಿಳಾ ಇಲಾಖೆ ಡಿಡಿ ವಾಸಂತಿ ಉಪ್ಪಾರ ಅವರು ತಮ್ಮ ಸ್ವಂತ ಮಗಳಂತೆ ಧಾರೆ ಎರೆದುಕೊಟ್ಟಿದ್ದು ವಿಶೇಷವಾಗಿತ್ತು.
ಇಲ್ಲಿಯ ತನಕ ಎಷ್ಟು ಮದುವೆ ಮಾಡಲಾಗಿದೆ ಗೊತ್ತಾ? :ಈ ರಾಜ್ಯ ಮಹಿಳಾ ನಿಲಯದಲ್ಲಿ ಅನಾಥರ 43 ವಿವಾಹಗಳು, 6 ನಾಮಕರಣ ಕಾರ್ಯಕ್ರಮಗಳು ನಡೆದಿವೆ. ಇಂದು ನಡೆದ ದಿವ್ಯಾ-ನಾಗರಾಜ್ ಮದುವೆ 43ನೇ ಕಲ್ಯಾಣ ಕಾರ್ಯಕ್ರಮವಾಗಿದೆ. ಇಂದು ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಆಗಿದೆ. ಈ ಅನಾಥರ ಕಲ್ಯಾಣ ಕಾರ್ಯಗಳಿಂದ ಮಹಿಳಾ ಮತ್ತು ಮಕ್ಕಳ ನಿಲಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮದುಮಗಳ ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್ ನೀಡಿದ್ದು, ಇಲಾಖೆ ಮೂರು ವರ್ಷಗಳ ನಂತರ ಬಡ್ಡಿ ಸಮೇತ ವಾಪಸ್ ನೀಡಲಿದೆ.