ಬೆಂಗಳೂರು:ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ನೀಡಿದ್ದ ಸಮ್ಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ. ಈ ವಿಷಯವನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ಧರಿಸುವುದು ಸೂಕ್ತವಾಗಿದೆ ಎಂದು ತಿಳಿಸಿದೆ.
ಪ್ರಕರಣ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಹೈಕೋರ್ಟ್ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ ಅಡಿಗ ಅವರಿದ್ದ ನ್ಯಾಯಪೀಠ ಇಂದು ತೀರ್ಪು ಪ್ರಕಟಿಸಿದೆ.
ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಸಿಬಿಐ ಕೇಂದ್ರ ಸರ್ಕಾರದ ಅಡಿ ಕಾರ್ಯನಿರ್ವಹಿಸಲಿದೆ. ಇಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಅಧಿಕಾರದ ಕುರಿತಾದ ನಿಬಂಧನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಎತ್ತಲಾಗಿದೆ. ಪಶ್ಚಿಮ ಬಂಗಾಳ ವರ್ಸಸ್ ಭಾರತ ಸರ್ಕಾರ ಪ್ರಕರಣದ ತೀರ್ಪಿನ ಪ್ರಕಾರ ಹಾಲಿ ಅರ್ಜಿಗಳು ಸಂವಿಧಾನದ 131ನೇ ವಿಧಿಯಡಿ ಬರಲಿವೆ. ಕೇಂದ್ರ ಸರ್ಕಾರವು ಎಲ್ಲಿಯವರೆಗೆ ರಾಜ್ಯವೊಂದರಲ್ಲಿ ಸಿಬಿಐ ಅನ್ನು ಕಾರ್ಯನಿರ್ವಹಣೆಗೆ ಹಚ್ಚಬಹುದು ಎಂಬುದಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನು ಒಳಗೊಂಡಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ. ಇಲ್ಲಿನ ಕಾನೂನಿನ ವಿಚಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸಂಬಂಧಿಸಿರುವುರಿಂದ ಇದನ್ನು ಸಂವಿಧಾನದ 131ನೇ ವಿಧಿಯಡಿ ಸುಪ್ರೀಂ ಕೋರ್ಟ್ ನಿರ್ಧರಿಸುವುದು ಸೂಕ್ತವಾಗಿದೆ. ಹೀಗಾಗಿ, ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂದು ತೀರ್ಪು ಪ್ರಕಟಿಸಿತು. ಆದಾಗ್ಯೂ, ಅರ್ಜಿದಾರರು ಸುಪ್ರೀಂ ಕೋರ್ಟ್ನಲ್ಲಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.