ಕರ್ನಾಟಕ

karnataka

ETV Bharat / state

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕಾನೂನು ಸುವ್ಯವಸ್ಥೆ ವಿಚಾರ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ನೋಟಿಸ್‍ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮನವಿ ಮಾಡಿದರು.

Etv Bharatdiscussion-on-law-and-order-situation-of-karnataka-in-assembly-session
ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಹದಗೆಟ್ಟ ಕಾನೂನು ಸುವ್ಯವಸ್ಥೆ ವಿಚಾರ

By ETV Bharat Karnataka Team

Published : Feb 14, 2024, 1:50 PM IST

ಬೆಂಗಳೂರು :ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪದ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಷಯ ಪ್ರಸ್ತಾಪಿಸಿದರು.

ಇಂದು ಬೆಳಗ್ಗೆ ಸದನ ಆರಂಭಗೊಂಡಾಗ ಸ್ಪೀಕರ್ ಯು.ಟಿ. ಖಾದರ್ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ನಿಲುವಳಿ ಸೂಚನೆ ನೋಟಿಸ್‍ ನೀಡಿದ್ದು, ಅದರ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ನಿನ್ನೆ ಕೂಡ ಇದೇ ವಿಚಾರದ ಬಗ್ಗೆ ನೋಟಿಸ್‍ ನೀಡಿದ್ದರೂ ಅವಕಾಶ ಸಿಗಲಿಲ್ಲ. ಹಾಗಾಗಿ ಇಂದು ನೋಟಿಸ್‍ ನೀಡಲಾಗಿದೆ ಎಂದರು. ಆಗ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವನ್ನು ನಿಯಮಾನುಸಾರ ನಿಲುವಳಿ ಸೂಚನೆ ಅಡಿ ಚರ್ಚಿಸಲು ಅವಕಾಶವಿಲ್ಲ ಎಂದು ಆಕ್ಷೇಪಿಸಿದರು. ಆದರೆ ಬೇರೆ ರೂಪದಲ್ಲಿ ಚರ್ಚಿಸಲು ತಮ್ಮದೇನೂ ತಕರಾರು ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಈ ಹಂತದಲ್ಲಿ ಅಶೋಕ್‍ ಅವರ ಬೆಂಬಲಕ್ಕೆ ನಿಂತ ಬಿಜೆಪಿ ಸದಸ್ಯರಾದ ಸುರೇಶ್‍ ಕುಮಾರ್, ಸುನೀಲ್‍ ಕುಮಾರ್ ಹಾಗೂ ಸಿ.ಸಿ. ಪಾಟೀಲ್‍ ಅವರು ನಿಲುವಳಿ ಸೂಚನೆಯಡಿ ಹತ್ತಾರು ಬಾರಿ ಕಾನೂನು ಸುವ್ಯವಸ್ಥೆ ವಿಚಾರ ಸದನದಲ್ಲಿ ಚರ್ಚೆಯಾಗಿದೆ. ನಮಗೂ ಅವಕಾಶ ಕೊಡಬೇಕು ಎಂದು ಒತ್ತಾಯ ಮಾಡಿದರು.

ಎರಡೂ ಕಡೆಯ ಅಭಿಪ್ರಾಯವನ್ನು ಆಲಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ವಿಚಾರ ನಿಲುವಳಿ ಸೂಚನೆಯಡಿ ಬರುವುದಿಲ್ಲ ಎಂದು ಸಭಾಧ್ಯಕ್ಷರು ಇದೇ ವೇಳೆ ರೂಲಿಂಗ್​ ನೀಡಿದರು. ಈ ವಿಚಾರವನ್ನು ನಿಯಮ 69ರ ಅಡಿ ಚರ್ಚೆಗೆ ಅನುವು ಮಾಡಿಕೊಡಲಾಗುವುದು. ಪ್ರತಿಪಕ್ಷದ ನಾಯಕರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಮಾತನಾಡಬಹುದು. ಸಮಯದ ಅಭಾವ ಇರುವುದರಿಂದ ಸಹಕರಿಸಬೇಕು ಎಂದು ಸ್ಪೀಕರ್ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.

ಸ್ಪೀಕರ್​ ಅವರ ಈ ಮನವಿಗೆ ಸಮ್ಮತಿಸಿದ ಅಶೋಕ್ ಅವರು ಕಾನೂನು ಮತ್ತು ಸುವ್ಯವಸ್ಥೆ ವಿಚಾರದ ಬಗ್ಗೆ ಗೃಹ ಸಚಿವರು ಪ್ರತ್ಯೇಕ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ಆರ್​ ಅಶೋಕ್​ ಅವರ ಈ ಮಾತಿಗೆ ಪರಮೇಶ್ವರ್ ಅವರು ಸಮ್ಮತಿ ಸೂಚಿಸಿದರು. ಬಳಿಕ ಪ್ರಶ್ನೋತ್ತರ ಕಲಾಪಕ್ಕೆ ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು.

ಇದನ್ನೂ ಓದಿ:ಎತ್ತಿನಹೊಳೆ ಯೋಜನೆ ಶೀಘ್ರ ಜಾರಿ: ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ

ABOUT THE AUTHOR

...view details