ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ಮತ್ತು ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗದ ಬಗ್ಗೆ ಮಹತ್ವದ ಚರ್ಚೆ - NEW RAILWAY LINE PROJECT

ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ಮತ್ತು ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ ಸಂಬಂಧ ಇಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾಪ್ರಬಂಧಕರ ಕಚೇರಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸಭೆ ನಡೆಸಿದರು.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾ ಪ್ರಬಂಧಕರ ಕಚೇರಿಯಲ್ಲಿ ಸಭೆ
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾ ಪ್ರಬಂಧಕರ ಕಚೇರಿಯಲ್ಲಿ ಸಭೆ (ETV Bharat)

By ETV Bharat Karnataka Team

Published : Dec 8, 2024, 10:24 PM IST

ಹುಬ್ಬಳ್ಳಿ:ಬಹುಕಾಲದಿಂದ ಬೇಡಿಕೆ ಇರುವ ಹಾಗೂ ಸುದೀರ್ಘ ಅವಧಿಯಲ್ಲಿ ಮೂರು ಬಾರಿ ಸಮೀಕ್ಷೆಯೂ ನಡೆದ ಹುಬ್ಬಳ್ಳಿ-ಶಿರಸಿ-ತಾಳಗುಪ್ಪ ಮತ್ತು ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗ ಸಂಬಂಧ ಮಹತ್ವದ ಚರ್ಚೆ ನಡೆಸಲಾಯಿತು.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾ ಪ್ರಬಂಧಕರ ಕಚೇರಿಯಲ್ಲಿ ಇಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ನೈಋತ್ಯ ರೈಲ್ವೆ ಮಹಾ ಪ್ರಬಂಧಕರೊಂದಿಗೆ ನಡೆದ ಸಭೆಯಲ್ಲಿ ಹೊಸ ರೈಲು ಮಾರ್ಗ ಸಂಬಂಧ ಚರ್ಚಿಸಲಾಯಿತು.

ಭೂ ಸ್ವಾಧೀನಕ್ಕಿರುವ ಅಡೆತಡೆ ನಿವಾರಿಸಲು ಸೂಚನೆ: ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗಕ್ಕೆ ಬೇಕಾಗಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಎಲ್ಲ ಅಡೆತಡೆಗಳನ್ನು ನಿವಾರಿಸಿ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲು ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವನ್ನಾಗಿಸುವ ಕುರಿತು ಯೋಜನಾ ವರದಿ ಸಹಿತ ಶೀಘ್ರ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು. ಅಲ್ಲದೇ, ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಬರುವ ಅಮೃತ ಭಾರತ ರೈಲ್ವೆ ನಿಲ್ದಾಣಗಳ ಕಾಮಗಾರಿ ತ್ವರಿತಗೊಳಿಸುವಿಕೆ ಹಾಗೂ ಇತರ ರೈಲ್ವೆ ಸಮಸ್ಯೆಗಳನ್ನೂ ನಿವಾರಿಸುವಂತೆ ನೈಋತ್ಯ ರೈಲ್ವೆ ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ ಅವರಿಗೆ ಸೂಚಿಸಲಾಯಿತು.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮಹಾ ಪ್ರಬಂಧಕರ ಕಚೇರಿಯಲ್ಲಿ ಸಭೆ (ETV Bharat)

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಪ್ರಸಕ್ತ ಪರಿಸ್ಥಿತಿ, ಅಣ್ಣಿಗೇರಿ ನಿಲ್ದಾಣದ ರೈಲ್ವೆ ಓವರ್ ಬ್ರಿಡ್ಜ್ ಎಲ್.ಸಿ. 18, ಎಲ್.ಸಿ.19 ಬಗೆಗಿನ ವಿಷಯವೂ ಸಭೆಯಲ್ಲಿ ಚರ್ಚೆಗೆ ಬಂತು.

ಹುಬ್ಬಳ್ಳಿ-ಅಹ್ಮದಾಬಾದ್ ಮಧ್ಯೆ ರೈಲು ಓಡಿಸಲು ಮನವಿ: ಸಾರ್ವಜನಿಕರ ಆಗ್ರಹದ ಮೇರೆಗೆ ವಾರದಲ್ಲಿ ಒಂದು ದಿನ ಹೊಸದಾಗಿ ಹುಬ್ಬಳ್ಳಿ-ಅಹಮದಾಬಾದ್ ಅಥವಾ ಹುಬ್ಬಳ್ಳಿ-ಜೋಧಪುರ ನಡುವೆ ರೈಲು ಓಡಿಸಲು ಮನವಿ ಮಾಡಲಾಯಿತು.

ವಾರದಲ್ಲಿ 3 ದಿನ ಹುಬ್ಬಳ್ಳಿ-ವಾರಣಾಸಿ ರೈಲು: ಬಹುಕಾಲದಿಂದಲೂ ಬೇಡಿಕೆಯಲ್ಲಿರುವ ಹುಬ್ಬಳ್ಳಿ-ವಾರಣಾಸಿ ರೈಲನ್ನು ವಾರದಲ್ಲಿ ಮೂರು ಬಾರಿ ಓಡಿಸುವಂತೆ ಇದೇ ವೇಳೆ ಸೂಚಿಸಲಾಯಿತು.

ಧಾರವಾಡ ರೈಲ್ವೆ ನಿಲ್ದಾಣದ ಬಳಿ ಖಾಲಿ ಇರುವ ಜಾಗದಲ್ಲಿ ಸುಸಜ್ಜಿತ ಉದ್ಯಾನವನ ನಿರ್ಮಿಸಲು ಹಾಗೂ ಎಲ್ಲಾ ಮಹತ್ವದ ರೈಲ್ವೆ ಅಭಿವೃದ್ಧಿ ಯೋಜನೆಗಳ ತ್ವರಿತ ಕಾರ್ಯಗತಗೊಳಿಸಲು ಹಾಗೂ ವಿವಿಧ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಹಾಲಿ ಇರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಯಿತು.

ಈ ಸಭೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಮಹಾಪ್ರಬಂಧಕ ಅರವಿಂದ ಶ್ರೀವಾತ್ಸವ ಹಾಗೂ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಅಂಧನಾದರೂ 5000 ರೈಲುಗಳ ಹೆಸರು, ಸಂಖ್ಯೆ, ವೇಳಾಪಟ್ಟಿ ಹೇಳಬಲ್ಲ "ರೈಲ್ವೆ ವಿಕಿಪೀಡಿಯಾ" ಈ ಅಕ್ಷದ್​ ಪಂಡಿತ್​

ABOUT THE AUTHOR

...view details