ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ಮಂಗಳೂರು: ಹರೀಶ್ ಪೂಂಜಾ ಅವರ ಪೋಸ್ಟ್ನ ಉದ್ದೇಶ ಬೇರೆ ಇದೆ. ನಾವು ರಾಜ್ಯಕ್ಕೆ ಅನ್ಯಾಯ ಆಗ್ತಿದೆ ಅಂತಿದೀವಿ. ಈ ಸತ್ಯಾಂಶವನ್ನು ಅವರು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದರೆ ಏನ್ ಹೇಳೋದು? ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯಕ್ಕೆ ಬರುವ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ದಿಯಾಗಿಲ್ಲ. ಇದು ರಾಜ್ಯಕ್ಕೆ ಅನ್ಯಾಯ. ಆ ವಿಚಾರವನ್ನು ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೆಯಬೇಕಂದ್ರೆ, ಅದು ದುರ್ದೈವ ಎಂದರು.
ಹರೀಶ್ ಪೂಂಜಾ ಸೋಶಿಯಲ್ ಮೀಡಿಯಾ ಪೋಸ್ಟ್: ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ತೆರಿಗೆ ಪಾಲು ನೀಡುವಂತೆ ಆಗ್ರಹಿಸುತ್ತಿರುವ ನಡುವೆ ಶಾಸಕ ಹರೀಶ್ ಪೂಂಜಾ, ಹಿಂದೂಗಳ ತೆರಿಗೆ ಹಿಂದೂಗಳಿಗೆ ಸಲ್ಲಬೇಕು ಎಂದು ಫೇಸ್ಬುಕ್ ಪೋಸ್ಟ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ದೇಶದಲ್ಲಿರುವ ತೆರಿಗೆ ಸಂಗ್ರಹದಲ್ಲಿ ಹಿಂದೂಗಳ ಪಾಲು ಎಷ್ಟು? ಇದರಲ್ಲಿ ಹಿಂದೂಗಳ ಅಭಿವೃದ್ಧಿಗೆ ಉಪಯೋಗವಾಗುತ್ತಿರುವುದು ಎಷ್ಟು? ಹಿಂದೂಗಳ ತೆರಿಗೆ ಹಿಂದೂಗಳಿಗೆ ಸಲ್ಲಬೇಕು ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ: '10 ವರ್ಷಗಳ ಹಿಂದೆ ರಾಜ್ಯದ ತೆರಿಗೆ ಪಾಲು ಎಷ್ಟಿತ್ತೋ ಇಂದೂ ಅಷ್ಟೇ ಇದೆ'