ಧಾರವಾಡ: ಕಳೆದ 15 ದಿನಗಳಿಂದ ನಿರಾಶ್ರಿತ ವೃದ್ಧ ಬೀದಿಬದಿ ಮಲಗಿಕೊಂಡಿರುವುದನ್ನು ಗಮನಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಕ್ಕೆ ಧಾರವಾಡ ಜಿಲ್ಲಾಡಳಿತ ಶೀಘ್ರವಾಗಿ ಸ್ಪಂದಿಸಿದೆ. ನಗರದ ಜನನಿಬಿಡ ಹಾಗೂ ವಾಹನನಿಬಿಡ ಸ್ಥಳವಾದ ಆಲೂರು ವೆಂಕಟರಾವ ವೃತ್ತ (ಜ್ಯುಬಿಲಿ ಸರ್ಕಲ್) ಬಳಿಯ ಪಿಜ್ಜಾ ಅಡ್ಡದ ಬುಡದ ಬೃಹತ್ ಗಟಾರು ಬಳಿ ವೃದ್ಧ ತಂಗಿದ್ದರು.
ಮುರಕಟ್ಟಿ ಗ್ರಾಮದ ಕೃಷಿಕ ಶಿವಪ್ಪ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಮನನೊಂದು ಊರು ಬಿಟ್ಟು, ಭಿಕ್ಷಾಟನೆಯಲ್ಲಿ ತೊಡಗಿದ್ದರು. ಶಕ್ತಿ ಕುಂದಿ ಮಳೆಯಲ್ಲಿ ನೆನೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಹಿರಿಯ ಪತ್ರಕರ್ತ ಹರ್ಷವರ್ಧನ್ ಶೀಲವಂತ, ಆರ್. ಶ್ರೀನಿಧಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡ ಟ್ವೀಟ್‍ಗೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಕೂಡಲೇ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲು ಆದೇಶಿಸಿದ್ದಾರೆ.