ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹೈದರಾಬಾದ್‌ನ ದಾನಿಗಳಾದ ಎ.ಆರ್ ಮಹೇಶ್- ರಾಧಿಕಾ ರೆಡ್ಡಿ ದಂಪತಿ ಚಿನ್ನದ ಪ್ರಭಾವಳಿಯನ್ನು ಕೊಡುಗೆ ರೂಪದಲ್ಲಿ ಸಮರ್ಪಿಸಿದರು. ಇದರ ಒಟ್ಟು ತೂಕ 3 ಕೆಜಿ 400ಗ್ರಾಂ ಇದ್ದು, ಇದರಲ್ಲಿ 1 ಕೆಜಿ 200 ಗ್ರಾಂ ಚಿನ್ನ ಹಾಗೂ 3 ಕೆಜಿ 200ಗ್ರಾಂ ಬೆಳ್ಳಿ ಸೇರಿದಂತೆ ಒಟ್ಟು ತಯಾರಿಕಾ ಮೊತ್ತ 75 ಲಕ್ಷ ರೂಪಾಯಿ ಖರ್ಚಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮಾತ್ರವಲ್ಲದೇ ಅವರು ಶ್ರೀ ಕ್ಷೇತ್ರಕ್ಕೆ 4 ರಿಂದ 5ಲಕ್ಷ ರೂ. ಮೊತ್ತದ ಹೂವಿನ ಉಡುಗೊರೆ ನೀಡಿದ್ದಾರೆ. ಈ ಹಿಂದೆ ಇವರು ಶ್ರೀ ಕ್ಷೇತ್ರಕ್ಕೆ ನಾಲ್ಕು ಪುಗಂನೂರು ಗೋವುಗಳು, ಭೋಜನ ಶಾಲೆಗೆ ಅಡುಗೆ ತಯಾರಿಸಲು ಬೇಕಾಗುವ ಪರಿಕರಗಳನ್ನು ನೀಡಿದ್ದರು. ಪ್ರಸ್ತುತ ಸಮರ್ಪಿಸಿದ ಚಿನ್ನದ ಪ್ರಭಾವಳಿಯನ್ನು ಪ್ರಸಿದ್ಧ ಶಿಲ್ಪಿಗಳಾದ ಅಲಗ್ ರಾಜ್ ಸ್ಥಪತಿ ಪದ್ಮಾಲಯ ಆರ್ಟ್ ಹಾಗೂ ಕ್ರಾಫ್ಟ್ ರಾಜೇಶ್ವರಿನಗರ ಬೆಂಗಳೂರು ಇವರಿಂದ ಮಾಡಿಸಲಾಗಿದ್ದು, ಬಹಳ ಸುಂದರವಾಗಿ ಮೂಡಿ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ಮಾತ್ರವಲ್ಲದೇ ಇತರೆ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕೊಲ್ಲೂರು, ಶಿರಡಿ, ರಾಜರಾಜೇಶ್ವರಿ ಬೆಂಗಳೂರು ಸೆರಿದಂತೆ ಮುಂತಾದ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ಚಿನ್ನದ ಕೆತ್ತನೆಯ ಕೆಲಸವನ್ನು ಮಾಡಿದ ಅನುಭವ ಇವರಿಗಿದೆ.