ಬೆಂಗಳೂರು:ಸದ್ಯ ಜಿಂದಾಲ್ಗೆ ಭೂಮಿ ನೀಡುವ ಕಾಂಗ್ರೆಸ್ ಸರ್ಕಾರದ ತೀರ್ಮಾನ ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಜಿಂದಾಲ್ಗೆ ಭೂಮಿ ಮಾರಾಟ ಮಾಡುವ ವಿಚಾರವು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಿದು ಜಿಂದಾಲ್ ಭೂಮಿ ಸುತ್ತದ ವಿವಾದ ಎಂಬ ವರದಿ ಇಲ್ಲಿದೆ.
ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಜೆಎಸ್ಡಬ್ಲ್ಯೂ ಸಂಸ್ಥೆಗೆ ಬಳ್ಳಾರಿಯಲ್ಲಿ ಭೂಮಿ ಮಾರಾಟ ಮಾಡಲು ತೀರ್ಮಾನಿಸಲಾಗಿತ್ತು. ಬಳ್ಳಾರಿ ಸಂಡೂರು ತಾಲೂಕಿನ ತೋರಣಗಲ್ ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2 ಸಾವಿರ ಎಕರೆ ಜಮೀನನ್ನು ಪ್ರತಿ ಎಕರೆಗೆ 1.22 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಹಾಗೂ ಸಂಡೂರು ತಾಲೂಕಿನ ತೋರಣಗಲ್, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಜಮೀನನ್ನು ಪ್ರತಿ ಎಕರೆಗೆ 1.50 ಲಕ್ಷ ರೂ. ಅಂತಿಮ ಬೆಲೆ ನಿಗದಿಪಡಿಸಿ ಜೆಎಸ್ಡಬ್ಲ್ಯೂ ಸ್ಟೀಲ್ ಪರವಾಗಿ ನೀಡಲು ನಿರ್ಧರಿಸಲಾಗಿದೆ.
ಹಿಂದೆ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಈ ನಿಟ್ಟಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಕೈಗೊಂಡ ಸಂಪುಟ ತೀರ್ಮಾನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಂದು ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿದ್ದ ಕಾಂಗ್ರೆಸ್ ಈಗ ತನ್ನ ಆಡಳಿತದಲ್ಲಿ ಜೆಎಸ್ಡಬ್ಲ್ಯೂಗೆ ಭೂಮಿ ನೀಡಲು ತೀರ್ಮಾನಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಸರ್ಕಾರದ ಈ ತೀರ್ಮಾನದ ಹಿಂದೆ ಕಿಕ್ ಬ್ಯಾಕ್ನ ಗಂಭೀರ ಆರೋಪ ಮಾಡುತ್ತಿದೆ.
ಏನಿದು ಜಿಂದಾಲ್ ಭೂಮಿ ವಿವಾದ?:ಬಳ್ಳಾರಿಯಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್ ಸಂಸ್ಥೆ ಜೊತೆ 2006-2007ರಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ಒಡಂಬಡಿಕೆ ಮಾಡಿತ್ತು. ಉಕ್ಕಿನ ಸ್ಥಾವರ ಸ್ಥಾಪಿಸಲು ಸಂಸ್ಥೆಗೆ ಬಳ್ಳಾರಿಯಲ್ಲಿ 3,666 ಎಕರೆ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. 10 ವರ್ಷಗಳ ಬಳಿಕ ಲೀಸ್ ಮತ್ತು ಪರಾಭಾರೆ ಒಪ್ಪಂದದಡಿ ಸಂಸ್ಥೆಗೆ ಈ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು. ತೋರಣಗಲ್ನಲ್ಲಿ 12 ದಶಲಕ್ಷ ಟನ್ ಸಾಮರ್ಥ್ಯದ ಸ್ಟೀಲ್ ಘಟಕ ನಿರ್ಮಾಣ ಇದಾಗಿದೆ.
2013-2018ರ ಅವಧಿಯಲ್ಲಿ ಜೆಎಸ್ಡಬ್ಲ್ಯೂ ಸಂಸ್ಥೆ ಒಪ್ಪಂದದಂತೆ ಭೂಮಿಯನ್ನು ಮಾರಾಟ ಮಾಡಲು ಪ್ರಸ್ತಾಪ ಸಲ್ಲಿಸಿತ್ತು. 27.05.2019ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಸಂಪುಟ ಸಭೆಯಲ್ಲಿ ಭೂಮಿ ಮಾರಾಟ ಮಾಡಲು ತೀರ್ಮಾನಿಸಿತ್ತು. ಆದರೆ, ಪ್ರತಿಪಕ್ಷ ಬಿಜೆಪಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸ್ವಪಕ್ಷದವರೇ ಆದ ಹೆಚ್.ಕೆ.ಪಾಟೀಲ್ ಕೂಡ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಎಂಎಂಎಲ್ ಸಂಸ್ಥೆಗೆ ಹಣ ಪಾವತಿಸದ ಆರೋಪ:ಹೆಚ್.ಕೆ.ಪಾಟೀಲ್ ಅಂದು ಕೈಗಾರಿಕಾ ಸಚಿವರಾಗಿದ್ದ ಕೆ.ಜೆ.ಜಾರ್ಜ್ಗೆ ಪತ್ರ ಬರೆದು, ಜೆಎಸ್ಡಬ್ಲ್ಯೂ ಸಂಸ್ಥೆ ಮೈಸೂರು ಮಿನರಲ್ಸ್ ಸಂಸ್ಥೆಗೆ (ಎಂಎಂಎಲ್) 1,200 ಕೋಟಿ ರೂ. ಹಣ ಬಾಕಿ ಉಳಿಸಿಕೊಂಡಿದ್ದು, ಕಡಿಮೆ ಬೆಲೆಗೆ ಸಂಸ್ಥೆಗೆ ಭೂಮಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಜೆಎಸ್ಡಬ್ಲ್ಯೂ ಸಂಸ್ಥೆ ಎಂಎಂಎಲ್ಗೆ ಕಡಿಮೆ ಪ್ರೀಮಿಯಂಗೆ ಕಬ್ಬಿಣದ ಅದಿರು ಪೂರೈಕೆ ಮಾಡಿತ್ತು ಎಂದು ಆರೋಪಿಸಲಾಗಿತ್ತು.