ನೆಲಮಂಗಲ: ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಕಳೆದೊಂದು ವರ್ಷದಲ್ಲಿ ಜಪ್ತಿ ಮಾಡಲಾಗಿದ್ದ ಮಾದಕ ವಸ್ತುಗಳನ್ನು ಶುಕ್ರವಾರ ಬೆಂಕಿಗಾಹುತಿ ಮಾಡುವ ಮೂಲಕ ನಾಶ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ 6 ಜಿಲ್ಲೆಗಳಿಂದ ಸಂಗ್ರಹಿಸಲಾಗಿದ್ದ 36.65 ಕೋಟಿ ಮೌಲ್ಯದ 3885.5 ಕೆಜಿ ಮಾದಕ ವಸ್ತುಗಳು ಇದರಲ್ಲಿದ್ದವು. ದಾಬಸ್ ಪೇಟೆಯ ಕರ್ನಾಟಕ ವೇಸ್ಟ್ ಮ್ಯಾನೇಜ್‌ಮೆಂಟ್ ಪ್ರಾಜೆಕ್ಟ್ (ರಾಮ್ಕಿ) ಕಂಪನಿಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಮಾದಕ ವಸ್ತುಗಳನ್ನು ಬೆಂಕಿಗೆ ಹಾಕಿದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಮಾದಕ ವಸ್ತುಗಳ ಮಾರಾಟ ಮತ್ತು ದುರ್ಬಳಕೆಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ "NDPS" ಕಾಯ್ದೆಯಡಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಡ್ರಗ್ಸ್ ಪ್ರಕರಣಗಳಲ್ಲಿ ಒಟ್ಟು 7,403 ಜನ ಆರೋಪಿಗಳನ್ನು ಹಾಗೂ 106 ವಿದೇಶಿಯರನ್ನು ಬಂಧಿಸಿ ಒಟ್ಟು ರೂ.128.98 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಡ್ರಗ್ಸ್ ವಿರುದ್ಧ ಸಮರಕ್ಕೆ ಶಕ್ತಿ ತುಂಬಲು ರಾಜ್ಯಮಟ್ಟದಲ್ಲಿ ಮೇಲ್ವಿಚಾರಣೆಗೆ ಸಿಐಡಿಯಲ್ಲಿ ಎಡಿಜಿಪಿ ಮಟ್ಟದ ಹುದ್ದೆಯನ್ನು ಸೃಜಿಸಲಾಗಿದೆ. ರಾಜ್ಯಾದ್ಯಂತ ಇದೇ ದಿನ, ವಶಪಡಿಸಿಕೊಂಡ ಡ್ರಗ್ಸ್ ವಿನಾಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ" ಎಂದು ಹೇಳಿದರು.
"ವಶಪಡಿಸಿಕೊಂಡ ಡ್ರಗ್ಸ್ ದುರುಪಯೋಗ ಆಗಬಾರದು ಎಂಬ ಕಾರಣಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿಗಳು ಮತ್ತು ಎಸ್.ಪಿ.ಗಳ ನೇತೃತ್ವದಲ್ಲಿ 'ಡ್ರಗ್ಸ್ ವಿಲೇವಾರಿ ಸಮಿತಿ'ಗಳನ್ನು ರಚಿಸಲಾಗಿದ್ದು, ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ" ಎಂದರು.