ಬೆಂಗಳೂರು :ರಾಜ್ಯಾದ್ಯಂತ ಕಳೆದ ಒಂದು ವರ್ಷದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಜಪ್ತಿ ಮಾಡಿರುವ ಒಟ್ಟು 59.16 ಕೋಟಿ ಮೌಲ್ಯದ ಮಾದಕ ಪದಾರ್ಥಗಳ ನಾಶಪಡಿಸುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಬೆಂಗಳೂರಿನ ಹೊರವಲಯದ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ತ್ಯಾಜ್ಯ ನಿರ್ವಹಣೆ ಯೋಜನೆ ಘಟಕದಲ್ಲಿ ಇಂದು ಡ್ರಗ್ಸ್ ನಾಶಪಡಿಸುವ ಕಾರ್ಯಕ್ರಮ ನಡೆಸಲಾಯಿತು. ಇದೇ ವೇಳೆ, ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಭಾಗಿಯಾಗಿದ್ದಾರೆ.
ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 3885.5 ಕೆಜಿ ಗಾಂಜಾ, 52.5 ಕೆಜಿ. ಎಂಡಿಎಂಎ, ಎಲ್‌ಎಸ್‌ಡಿ, ಹಶಿಸ್, ಗಾಂಜಾ ಆಯಿಲ್, ಹೆರಾಯಿನ್ ಮುಂತಾದ ಮಾದಕ ವಸ್ತುಗಳು ಸೇರಿ ಒಟ್ಟು ಮೌಲ್ಯ 36.65 ಕೋಟಿ ರೂ ವಸ್ತುಗಳನ್ನು ಇಂದು ನಾಶಪಡಿಸಲಾಗುತ್ತಿದೆ. ಅಲ್ಲದೇ 17 ಕೋಟಿ ರೂ ಮೌಲ್ಯದ 15 ಕೆ.ಜಿ ಓಪಿಯಮ್ ಎನ್‌ಡಿಪಿಎಸ್ ಕಾಯ್ದೆ ಅನ್ವಯ ನಾಶಮಾಡಲು ಘಾಜೀಪುರಕ್ಕೆ ಕಳುಹಿಸಲಾಗಿದೆ.
ಮಾದಕ ವಸ್ತುಗಳ ಮಾರಾಟ, ದುರ್ಬಳಕೆ ಹತೋಟಿಯಲ್ಲಿಡಲು ರಾಜ್ಯ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2023ರಲ್ಲಿ ರಾಜ್ಯದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 6764 ಪ್ರಕರಣಗಳನ್ನು ದಾಖಲಿಸಿ 9645 ಕೆಜಿ ಗಾಂಜಾ, 233 ಕೆಜಿ ಸಿಂಥೆಟಿಕ್ ಡ್ರಗ್ಸ್ ಸಹಿತ ಒಟ್ಟು 128.98 ಕೋಟಿ ರೂ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಒಟ್ಟು 106 ಜನ ವಿದೇಶಿಯರ ಸಹಿತ 7403 ಜನ ಆರೋಪಿಗಳನ್ನು ಬಂಧಿಸಲಾಗಿದೆ.