ಕರ್ನಾಟಕ

karnataka

ETV Bharat / state

ಬೆಂಗಳೂರಿನ 205 ಕೆರೆಗಳ ನಿರ್ವಹಣೆ, ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳಿಗೆ ವಹಿಸಲು ನಿರ್ಧಾರ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ - Bengaluru lakes - BENGALURU LAKES

ಬಿಬಿಎಂಪಿ ವ್ತಾಪ್ತಿಯ ಕೆರೆಗಳ ಸಂರಕ್ಷಣೆಗಾಗಿ ರೂಪಿಸಿರುವ ನೀತಿಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸಂಘ ಸಂಸ್ಥೆಗಳನ್ನು ಸೇರ್ಪಡೆ ಮಾಡುವ ಸಂಬಂಧದ ಅಂಶ ಒಳಪಡಿಸಲಾಗಿದೆ ಎಂದು ಹೈಕೋರ್ಟ್​ಗೆ ರಾಜ್ಯ ಸರ್ಕಾರ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Jul 9, 2024, 9:35 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ 205 ಕೆರೆಗಳ ಪುನಶ್ಚೇತನ ಮಾಡುವುದು ಮತ್ತು ಅವುಗಳ ಸಂರಕ್ಷಣೆ ಮಾಡುವುದಕ್ಕಾಗಿ ಖಾಸಗಿ ಸಂಘ - ಸಂಸ್ಥೆಗಳಿಗೆ (ಸ್ಥಳೀಯ ನಿವಾಸಿಗಳ ಸಂಘಗಳು, ಸಹಕಾರ ಸಂಘಗಳು, ಎನ್​ಜಿಓ, ಕಾರ್ಪೋರೆಟ್ ಕಂಪನಿಗಳಿಗೆ ) ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

ನಗರದ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿಗೊಳಿಸಲು ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತಿತರ ಸಂಘ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ. ಕೆ.ವಿ.ಅರವಿಂದ್ ಅವರಿದ್ದ ನ್ಯಾಯ ಪೀಠಕ್ಕೆ ಮಂಗಳವಾರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಬಿಬಿಎಂಪಿ ವ್ತಾಪ್ತಿಯ ಕೆರೆಗಳ ಸಂರಕ್ಷಣೆಗಾಗಿ ರೂಪಿಸಿರುವ ನೀತಿಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸಂಘ ಸಂಸ್ಥೆಗಳನ್ನು ಸೇರ್ಪಡೆ ಮಾಡುವ ಸಂಬಂಧದ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ. ನಗರದಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾಗಿದೆ ಅವುಗಳ ನಿರ್ವಹಣೆ ಮತ್ತು ರಕ್ಷಣೆಗಾಗಿ ವಾರ್ಷಿಕ 30 ಕೋಟಿ ರೂ.ಗಳ ವೆಚ್ಚವಾಗುತ್ತಿದೆ. ಈ ನೀತಿ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರಲಿದೆ. ಆದರೆ, ಕೆರೆಗಳ ಮಾಲೀಕತ್ವವೂ ಬಿಬಿಎಂಪಿ ಮತ್ತು ಸರ್ಕಾರದ ಬಳಿಯಲ್ಲಿರಲಿದೆ ಎಂದು ಪೀಠಕ್ಕೆ ವಿವರಿಸಿದರು.

ಸಿಟಿಜನ್ ಆಕ್ಷನ್ ಗ್ರೂಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಜೈನಾ ಕೋಥಾರಿ, ಕೆಲವು ಕೆರೆಗಳ ಸಂರಕ್ಷಣೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಗುಂಪುಗಳನ್ನು ರಚನೆ ಮಾಡಿಕೊಂಡಿದ್ದಾರೆ. ಈ ಗುಂಪುಗಳಿಗೆ ಆಯಾ ಭಾಗದ ಕೆರೆಗಳ ಕುರಿತಂತೆ ಸಂಪೂರ್ಣ ಅರಿವಿರಲಿದೆ. ಆದರೆ, 205 ಕೆರೆಗಳಗಳನ್ನು ಖಾಸಗಿಯವರಿಗೆ ನೀಡಲು ನೀತಿ ರೂಪಿಸಿದರೆ ಅದರಲ್ಲಿ ಬಿಬಿಎಂಪಿ ಪಾತ್ರ ಏನು ಎಂಬುದು ಗೊತ್ತಾಗಬೇಕಿದೆ ಎಂದು ಪೀಠಕ್ಕೆ ತಿಳಿಸಿದರು. ಅಲ್ಲದೇ, ಸರ್ಕಾರ ರಚನೆ ಮಾಡಿರುವ ನೀತಿಯ ಕುರಿತಂತೆ ಪರಿಶೀಲಿಸಿ ಅದಕ್ಕೆ ಪ್ರತಿಕ್ರಿಯೆ ನೀಡುವುದಕ್ಕೆ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದರು.

ಖಾಸಗೀಕರಣಕ್ಕೆ ಮಾರ್ಗ ಮಾರ್ಗವಾಗಬಾರದು: ಈ ವೇಳೆ ಪೀಠ, ಕೆರೆಗಳ ಸಂರಕ್ಷಣೆ ಹೆಸರಿನಲ್ಲಿ ಸರ್ಕಾರದ ಮಾಡುತ್ತಿರುವ ಪಾಲಿಸಿ ಖಾಸಗೀಕರಣಕ್ಕೆ ಅವಕಾಶ ನೀಡುವುದಕ್ಕೆ ಮಾರ್ಗವಾಗಬಾರದು ಎಂದು ನ್ಯಾಯಪೀಠ ಇದೇ ವೇಳೆ ಮೌಖಿಕವಾಗಿ ಅಭಿಪ್ರಾಯ ಪಟ್ಟಿತು. ಜತೆಗೆ, ಯಾವ ಕೆರೆ ಸ್ವಚ್ಚಗೊಳಿಸು ಅಗತ್ಯವಿದೆಯೋ ಆ ಕೆರೆಗಳ ಸ್ವಚ್ಚಗೊಳಿಸುವ ಕಾರ್ಯ ಮುಂದುವರೆಯಬೇಕು. ಕೆರೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಅಲ್ಲದೇ, ಸರ್ಕಾರದ ಪಾಲಿಸಿಗೆ ಸಂಬಂಧಿಸಿದಂತೆ ಅರ್ಜಿದಾರರು ಪರಿಶೀಲಿಸಿ ತಮ್ಮ ಸಲಹೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 31ಕ್ಕೆ ನಿಗದಿ ಪಡಿಸಿತು.

ಪ್ರಕರಣದ ಹಿನ್ನೆಲೆ:ಕೆರೆ ಮತ್ತು ಕೆರೆಗೆ ನೀರು ಹರಿದುವಬರುವ ರಾಜಕಾಲುವೆಗಳ ಒತ್ತುವರಿ ಮಾಡಲಾಗಿದೆ. ಜತೆಗೆ, ಕೊಳಚೆ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸುವ ಮೂಲಕ ಕೆರೆಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಅದಕ್ಕೆ ತಡೆಯೊಡ್ಡಬೇಕು ಎಂದು ಕೋರಿ ಹಲವು ಮಂದಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ:ದ್ವೇಷ ಭಾಷಣ ವಿಚಾರ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ABOUT THE AUTHOR

...view details