ಕರ್ನಾಟಕ

karnataka

ETV Bharat / state

ತೆರಿಗೆ ಅನ್ಯಾಯ, ನೀರಾವರಿ ಯೋಜನೆಗಳ ತಾರತಮ್ಯ ಕುರಿತ ಚರ್ಚೆ; ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ

ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ತೆರಿಗೆ ಅನ್ಯಾಯ, ನೀರಾವರಿ ಯೋಜನೆಗಳ ತಾರತಮ್ಯ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಹೊತ್ತು ಮಾತಿನ ಚಕಮಕಿ ಕೂಡ ಕಂಡು ಬಂದಿತು.

ವಿಧಾನಸಭೆ
ವಿಧಾನಸಭೆ

By ETV Bharat Karnataka Team

Published : Feb 20, 2024, 3:36 PM IST

Updated : Feb 20, 2024, 5:41 PM IST

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವುದು

ಬೆಂಗಳೂರು:ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ತೆರಿಗೆ ಅನ್ಯಾಯ ಹಾಗೂ ನೀರಾವರಿ ಯೋಜನೆಗಳ ತಾರತಮ್ಯ ಕುರಿತು ಚರ್ಚೆಯಾಗಿ ವಿಧಾನಸಭೆಯಲ್ಲಿ ಮಂಗಳವಾರ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆಯಾಗಿ, ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದ ವೇಳೆ, ಪ್ರತಿ ಬಾರಿಯೂ ಬಿಜೆಪಿಯವರು ಎಲ್ಲಾ ಯೋಜನೆಗೂ ಕೇಂದ್ರ ಸರ್ಕಾರದ ಹಣ ಎಂದು ಹೇಳುವುದನ್ನು ನೋಡುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಎಲ್ಲಿಂದ ಹಣ ಬರುತ್ತದೆ? ನಮ್ಮ ರಾಜ್ಯ, ದೇಶದ ಜನರು ಕೊಡುವ ತೆರಿಗೆ ಹಣ ತಾನೇ? ಕರ್ನಾಟಕದಿಂದ 4.30 ಲಕ್ಷ ಕೋಟಿ ರೂ. ಕೇಂದ್ರಕ್ಕೆ ವಾರ್ಷಿಕ ತೆರಿಗೆ ಆದಾಯವಿದೆ. ರಾಜ್ಯಕ್ಕೆ ವಾಪಾಸ್ ಬರುತ್ತಿರುವುದು 50 ಸಾವಿರ ಕೋಟಿ ರೂಪಾಯಿ ಮಾತ್ರ ಎಂದರು.

ಈ ವೇಳೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ಸರಿಯಾದ ಮಾಹಿತಿ ಕೊಡಿ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ, ಈವರೆಗೂ 14 ಹಣಕಾಸು ಆಯೋಗದಿಂದ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಕ್ಕಿತ್ತು. 15ನೇ ಹಣಕಾಸು ಆಯೋಗದಲ್ಲಿ ಅನ್ಯಾಯವಾಗಿದೆ. 50,252 ಕೋಟಿ ರೂ. ಮಾತ್ರ ಬಂದಿದೆ ಎಂದು ವಿವರಿಸಿದರು. ತೆರಿಗೆ ಅನ್ಯಾಯವಾಗಿದೆ ಎಂದು ಹೇಳಿದರೆ ಬಿಜೆಪಿಯವರು ಬೇರೆ, ಬೇರೆ ರೀತಿ ವ್ಯಾಖ್ಯಾನ ಮಾಡುತ್ತಾರೆ. ಅದೇ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ತೆರಿಗೆ ಪಾಲಿನ ಬಗ್ಗೆ ಏನು ಹೇಳಿದ್ದಾರೆ ಎಂದು ಪ್ರಶ್ನಿಸಿದರು.

ಗುಜರಾತ್‍ನಿಂದ ತೆರಿಗೆಯನ್ನೇ ವಸೂಲಿ ಮಾಡಬೇಡಿ ಎಂದು ನರೇಂದ್ರ ಮೋದಿ ಹೇಳಿದ್ದರು. ಇಲ್ಲಿ ನಮಗೆ ಅನ್ಯಾಯವಾಗುತ್ತಿರುವುದನ್ನು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರೆ ಬಿಜೆಪಿಯವರು ದೇಶ ವಿಭಜನೆ ಮಾಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.

ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ನರೇಂದ್ರ ಮೋದಿ ತೆರಿಗೆ ಬಗ್ಗೆ ಕೇಳಿದ್ದರು. ಆದರೆ, ಡಿ.ಕೆ.ಸುರೇಶ್ ದೇಶ ವಿಭಜನೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಬಗ್ಗೆ ಇಲ್ಲಿ ಚರ್ಚೆ ಮಾಡಬಾರದು. ಕಾಂಗ್ರೆಸ್ ಸಂಸತ್​ನಲ್ಲಿ ತೆರಿಗೆ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿಲ್ಲ ಎಂದು ತಿರುಗೇಟು ನೀಡಿದರು.

ಸಚಿವ ಜಮೀರ್ ಅಹಮದ್ ಖಾನ್, ನಿಮ್ಮದೇ ಪಕ್ಷದ 25 ಸಂಸದರು ಗೆದ್ದಿದ್ದಾರೆ. ಅವರು ಬಾಯಿ ಬಿಡಬೇಕು ಎಂದು ಚುಚ್ಚಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ನಿಮ್ಮ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದವರೇ ಆಗಿದ್ದಾರೆ. ಈವರೆಗೂ ಒಮ್ಮೆಯೂ ಸಂಸತ್‍ನಲ್ಲಿ ಕೇಂದ್ರದ ತಾರತಮ್ಯದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಅಶೋಕ್ ಪ್ರಶ್ನಿಸಿದರು.

ಉತ್ತರ ಮುಂದುವರೆಸಿದ ಸಿಎಂ ಸಿದ್ದರಾಮಯ್ಯ, ಆದಾಯ ತೆರಿಗೆ, ಜಿಎಸ್‍ಟಿ, ವಿಮಾನದಲ್ಲಿ ಬಳಸುವ ಇಂಧನದ ಮೇಲಿನ ಸೆಸ್, ಅಬಕಾರಿ ಸುಂಕ, ವಿಮಾನ ನಿಲ್ದಾಣ, ಹೆದ್ದಾರಿ ಟೋಲ್, ಐಟಿ ರಫ್ತು ಸೇರಿ 2023-24ರಲ್ಲಿ 4.30 ಲಕ್ಷ ಕೋಟಿ ಕೇಂದ್ರಕ್ಕೆ ರಾಜ್ಯದಿಂದ ಸಂಪನ್ಮೂಲ ಸಂಗ್ರಹವಾಗಿದೆ. ನರೇಂದ್ರ ಮೋದಿ ಗುಜರಾತ್‍ಗೆ ಕೇಂದ್ರ ತೆರಿಗೆ ಪಾಲಿನಲ್ಲಿ ಶೇ.50ರಷ್ಟು ಪಾಲು ನೀಡಬೇಕು. ಈಗ ನಮಗೂ ಶೇ.50ರಷ್ಟು ಪಾಲು ನೀಡಿ ಎಂದು ಒತ್ತಾಯಿಸಿದರು. ತೆರಿಗೆ ಪಾಲು ಹಾಗೂ ಕೇಂದ್ರ ಬಜೆಟ್‍ನ ಗಾತ್ರಕ್ಕೆ ಅನುಗುಣವಾಗಿ ರಾಜ್ಯಕ್ಕೆ ಅನುದಾನ ಹಂಚಿಕೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವುದು

ಮುಖ್ಯಮಂತ್ರಿ ಮಾತಿನ ನಡುವೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಮುಖ್ಯಮಂತ್ರಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬೆಂಗಳೂರು-ಮೈಸೂರು ರಸ್ತೆ ಮಾಡಿದ್ದು ಯಾರು ಎಂದಾಗ, ಮುಖ್ಯಮಂತ್ರಿಯವರು ರಾಜ್ಯದ ಹೆದ್ಧಾರಿಗಳಿಂದ ಕೇಂದ್ರಕ್ಕೆ ವರ್ಷಕ್ಕೆ ಮೂರು ಸಾವಿರ ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. ರಸ್ತೆ ಮಾಡಿದ್ದು ನಮ್ಮ ದುಡ್ಡಿನಿಂದ ಎಂದು ತಿರುಗೇಟು ನೀಡಿದರು. ಕೇಂದ್ರದಿಂದ ಮೂಲಸೌಕರ್ಯಕ್ಕೆ ನೀಡಿದ್ದ ಹಣದ ಲೆಕ್ಕ ಹೇಳಿ ಎಂದು ಬಿಜೆಪಿಯವರು ಕೆಣಕಿದರು.

ಆರ್.ಅಶೋಕ್ ಮಾತನಾಡಿ, ತಾರತಮ್ಯವಾಗಿದೆ ಎಂಬ ಆರೋಪಕ್ಕೆ ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದ್ದಾರೆ. ಹಿಂದಿನ ಯುಪಿಎ ಅವಧಿಗಿಂತಲೂ ಎನ್‍ಡಿಎ ಅವಧಿಯಲ್ಲಿ ಹೆಚ್ಚಿನ ಅನುದಾನ ರಾಜ್ಯಕ್ಕೆ ಬಂದಿದೆ ಎಂದು ಲೆಕ್ಕ ಹೇಳಿದರು. ಬಜೆಟ್ ಗಾತ್ರಕ್ಕನುಗುಣವಾಗಿ ಹಣ ಬಂದಿಲ್ಲ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು. 15ನೇ ಹಣಕಾಸು ಆಯೋಗದ ಮುಂದೆ ಸಿದ್ದರಾಮಯ್ಯ ಅವರ ಸರ್ಕಾರವೇ ಪ್ರತಿಪಾದನೆ ಮಾಡಿದೆ. ಅನ್ಯಾಯವಾಗಿದ್ದರೆ ಅಗಲೇ ಹೇಳಬೇಕಿತ್ತು. ಏಕೆ ಬಾಯಿ ಮುಚ್ಚಿಕೊಂಡಿದ್ದರು ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದರು.

ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಅನ್ಯಾಯವಾಗಿದೆ ಎಂಬ ಕಾರಣಕ್ಕೆ ಮಧ್ಯಂತರ ವರದಿಯಲ್ಲಿ 11,495 ಸಾವಿರ ಕೋಟಿ ವಿಶೇಷ ಅನುದಾನ ನೀಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶೇಷ ಅನುದಾನವನ್ನು ತಿರಸ್ಕರಿಸಿದರು ಎಂದು ಸಿದ್ದರಾಮಯ್ಯ ಪ್ರತ್ಯುತ್ತರಿಸಿದರು.

ಮುಖ್ಯಮಂತ್ರಿಯವರು ಮಾಹಿತಿ ತಪ್ಪು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರ ಬಗ್ಗೆ ನಾನು ಬಜೆಟ್ ಮೇಲೆ ಮಾತನಾಡುವಾಗ ಸವಿಸ್ತಾರವಾಗಿ ವಿವರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿದ್ದ ಶಿಫಾರಸ್ಸು ಅಂತಿಮ ವರದಿ ಇರಲಿಲ್ಲ ಅಶೋಕ್ ಸಮರ್ಥಿಸಿಕೊಂಡಿದ್ದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಆರು ರಾಜ್ಯಗಳಿಗೆ 26 ಸಾವಿರ ಕೋಟಿ ರೂಪಾಯಿ ನೀಡುವಂತೆ ಆಯೋಗ ಮಧ್ಯಂತರ ಶಿಫಾರಸ್ಸು ಮಾಡಿತ್ತು. ಅಂತಿಮ ವರದಿಯಲ್ಲಿ ತನ್ನ ಶಿಫಾರಸ್ಸನ್ನು ಆಯೋಗ ತಳ್ಳಿ ಹಾಕಿದೆ ಎಂದರಲ್ಲದೆ, ಬೆಂಗಳೂರಿನ ಫೆರಿಫಿರಲ್ ರಸ್ತೆಗೆ ಮೂರು ಸಾವಿರ ಕೋಟಿ ಈಗಲೂ ಬಾಕಿ ಇದೆ. ರಾಜ್ಯ ಸರ್ಕಾರ ಕೆಲಸ ಆರಂಭಿಸಿದರೆ ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡಲಿದೆ. ಭದ್ರಾಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು ಎಂಬುದು ನಮ್ಮ ಒತ್ತಾಸೆ. ಅದಕ್ಕೆ ಅಗತ್ಯವಾದ ಎಲ್ಲಾ ಪೂರ್ವಾನುಮತಿಗಳು ಸಿಕ್ಕಿವೆ. ಈಗಲೂ ಪ್ರಯತ್ನ ಮಾಡಿದರೆ ಅದು ಸಾಧ್ಯವಾಗಲಿದೆ. ಬಜೆಟ್‍ನಲ್ಲಿ ನಿರ್ಮಲಾ ಸೀತಾರಮನ್ ಬಜೆಟ್‍ನಲ್ಲಿ ಘೋಷಿಸಿದ 5,300 ಕೋಟಿ ರೂ. ಪಡೆದುಕೊಳ್ಳಲು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ಸಿದ್ಧ ಪಡಿಸಬೇಕಿದೆ. ಒಂದು ವೇಳೆ ಹಣ ಬರದಿದ್ದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಹೇಳಿದರು.

ಘೋಷಿತ ಹಣ ತಂದು ಕೋಡಿ ನಾನು ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದಾಗ, ರಾಜ್ಯ ಸರ್ಕಾರದಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಹಣ ಬಿಡುಗಡೆ ಮಾಡಲಿದೆ ಎಂದ ಬೊಮ್ಮಾಯಿ ಅವರು, ಕಳೆದ 9 ತಿಂಗಳಿನಿಂದ ನಿಮ್ಮ ಸರ್ಕಾರ ಏನು ಮಾಡಿದೆ, ನಿಮಗೆ ಕೇಂದ್ರದಿಂದ ಹಣ ಪಡೆದುಕೊಳ್ಳುವುದು ಗೊತ್ತಿಲ್ಲ. ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಆಕ್ಷೇಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು ಭಂಡತನದಲ್ಲಿ ವಾದ ಮಾಡುತ್ತಿದ್ದಾರೆ ಎಂದು ಎದಿರೇಟು ನೀಡಿದರು.

ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿರುವುದು

ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಕೇಂದ್ರ ಬಜೆಟ್ ಘೋಷಿಸಿದ 5,300 ಕೋಟಿ ರೂ. ಸೇರಿಸಿಕೊಂಡು, ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‍ನಲ್ಲಿ ಜಲಸಂಪನ್ಮೂಲ ಇಲಾಖೆಗೆ 21 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದರು. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಹಲವು ಪ್ರಸ್ತಾವನೆಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಕೇಂದ್ರ ಸರ್ಕಾರದ ಅನ್ನು ಒಪ್ಪಿಕೊಂಡಿದೆ, ಹಣ ಬಿಡುಗಡೆ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆಯ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಹಣ ಬಿಡುಗಡೆ ಮಾಡದೆ ನೆನೆಗುದಿಯಲ್ಲಿಟ್ಟಿದೆ ಎಂದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ರಾಷ್ಟ್ರೀಯ ಯೋಜನೆ ಘೋಷಣೆಗೆ ಎನ್-ಫಾರ್ಮೆಟ್‍ನಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ದೆಹಲಿಗೆ ಹೋಗಿ ಭೇಟಿಯಾದರೆ ಪ್ರಯೋಜನವಾಗುವುದಿಲ್ಲ. ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸುವುದು ಅಗತ್ಯ. ಘೋಷಿತ ಹಣ ಬಂದೇ ಬರುತ್ತದೆ ಎಂದರು.

ಅದಕ್ಕೆ ಡಿ.ಕೆ.ಶಿವಕುಮಾರ್, ನಿಗದಿತ ಎಲ್ಲಾ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇನ್ನು ಯಾವ ನಮೂನೆ ಇದೆಯೋ ಅದನ್ನು ಕೊಡಿ ಅದರ ಪ್ರಕಾರವೇ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಹೇಳಿದರು. ಈ ವಿಚಾರ ಸಾಕಷ್ಟು ವಾದ ವಿವಾದಕ್ಕೆ ಕಾರಣವಾಯಿತು. ಬಿಜೆಪಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರೆ, ಆಡಳಿತ ಪಕ್ಷದ ನಾಯಕರು ಕೇಂದ್ರದ ತಾರತಮ್ಯವನ್ನು ಹಿಗ್ಗಾಮುಗ್ಗಾ ಟೀಕಿಸಿದರು.

ಇದನ್ನೂ ಓದಿ:ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?, ಸೆಟ್ಲ್​ಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ: ಹೆಚ್​ಡಿಕೆ

Last Updated : Feb 20, 2024, 5:41 PM IST

ABOUT THE AUTHOR

...view details