ಕರ್ನಾಟಕ

karnataka

ETV Bharat / state

ಬಿಎಸ್​ವೈ ವಿರುದ್ಧ ಪೋಕ್ಸೋ ದೂರು ನೀಡಿದ್ದ ಮಹಿಳೆಯ ಸಾವು ಪ್ರಕರಣಕ್ಕೆ ಮರುಜೀವ? - Yediyurappa POCSO Case - YEDIYURAPPA POCSO CASE

ಸಂತ್ರಸ್ತೆಯ ತಾಯಿ ಮೇ 26ರಂದು ಸಾವನ್ನಪ್ಪಿದ್ದರು. ಮೃತರ ಸಹೋದರ ಹಾಗೂ ಮಗಳು ಅನುಮಾನ ವ್ಯಕ್ತಪಡಿಸಿ ಮೇ 27ರಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ತನಿಖೆ ನಡೆದಿರಲಿಲ್ಲ. ಇದೀಗ ಮಹಿಳಾ ಆಯೋಗ ಸಮಗ್ರ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ಪತ್ರ ಬರೆದಿದೆ.

ಹುಳಿಮಾವು ಪೊಲೀಸ್​ ಠಾಣೆ
ಹುಳಿಮಾವು ಪೊಲೀಸ್​ ಠಾಣೆ (ETV Bharat)

By ETV Bharat Karnataka Team

Published : Sep 3, 2024, 6:52 AM IST

Updated : Sep 3, 2024, 10:55 AM IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ ಸಂತ್ರಸ್ತೆಯ ತಾಯಿಯ ಸಾವಿನ ಪ್ರಕರಣ ಮರುಜೀವ ಪಡೆದುಕೊಳ್ಳುವ ಸಾಧ್ಯತೆ ಗೋಚರಿಸಿದೆ. ಪ್ರಕರಣದ ದೂರುದಾರ ಮಹಿಳೆಯ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗವು ಸಮಗ್ರ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ಪ್ರಕರಣವೇನು?:ಕಳೆದ ಫೆ.2ರಂದು ಸಹಾಯ ಕೇಳಲು ಹೋದಾಗ ಯಡಿಯೂರಪ್ಪನವರು ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ತಾಯಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಇದೀಗ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಮಧ್ಯೆ ಸಂತ್ರಸ್ತೆಯ ತಾಯಿ ಮೇ 26ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಅವರು ಮೃತಪಟ್ಟರೆಂದು ವೈದ್ಯರು ಹೇಳಿದ್ದರು. ಆದರೆ, ಇದೀಗ ದೂರುದಾರ ಮಹಿಳೆಯ ಸಹೋದರ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಶವ ಪರೀಕ್ಷೆ ನಡೆಸದೆಯೇ ಮೃತ ಮಹಿಳೆಯ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಆರೋಪಿಸಿ ಮೇ 27ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಯಾವುದೇ ತನಿಖೆ ನಡೆದಿರಲಿಲ್ಲ.

ಹೀಗಾಗಿ ಮಹಿಳಾ ಸಂಘಟನೆಯ ಸದಸ್ಯರು, ಸಾವಿನ ಬಗ್ಗೆ ಸಾಕಷ್ಟು ಅನುಮಾನವಿದೆ. ಹೆಚ್ಚಿನ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಔಧರಿ ಮಹಿಳೆಯ ಸಾವು ಮತ್ತು ಅಂತ್ಯಸಂಸ್ಕಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಪೋಕ್ಸೋ ಪ್ರಕರಣದ ದೂರುದಾರ ಮಹಿಳೆಯ ಸಹೋದರ ಮತ್ತು ಕೆಲವು ಸಂಘಟನೆಗಳು ದೂರು ಸಲ್ಲಿಸಿವೆ. ಮಹಿಳೆಯ ಸಾವಿನ ಬಳಿಕ ಆಕೆಯ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂಬ ಆರೋಪವಿದೆ. ಮರಣೋತ್ತರ ಪರೀಕ್ಷೆ ನಡೆಸದೇ ಇರುವುದು ಅನುಮಾನಾಸ್ಪದವಾಗಿದೆ ಎಂದು ಮಹಿಳೆ ಕುಟುಂಬ ಸದಸ್ಯರು ಹಾಗೂ ಮಹಿಳಾ ಸಂಘಟನೆಯ ಆರೋಪ. ಹೀಗಾಗಿ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅವರು ನಗರ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

ಈ ಕುರಿತು ಮಾತನಾಡಿರುವ ನಾಗಲಕ್ಷ್ಮೀ ಚೌಧರಿ, "ಎರಡು ದಿನಗಳ ಹಿಂದಷ್ಟೇ ನನ್ನನ್ನು ಮಹಿಳೆಯ ಪುತ್ರಿ ಭೇಟಿಯಾಗಿದ್ದರು. ಕ್ಯಾನ್ಸರ್‌ನಿಂದ ದಿಢೀರ್ ಸಾವು ಹೇಗೆ ಸಂಭವಿಸುತ್ತೆ ಎಂಬುದು ನಮ್ಮ ಪ್ರಶ್ನೆ. ಮಹಿಳೆಯ ಶವ ಹಸ್ತಾಂತರದ ವೇಳೆಯೂ ಹಲವು ಲೋಪಗಳಾಗಿವೆ. ಈ ಎಲ್ಲಾ ವಿಚಾರಗಳು ಸಾಕಷ್ಟು ಅನುಮಾನಕ್ಕೆ ಕಾರಣವಾಗಿವೆ. ಸಾವಿನ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಹುಳಿಮಾವು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯಾಗಿರಲಿ, ಜನಸಾಮಾನ್ಯರೇ ಇರಲಿ, ತಪ್ಪಿಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ" ಎಂದರು.

ಇದನ್ನೂ ಓದಿ:ಬಿಎಸ್‌ವೈ ವಿರುದ್ಧ ದೂರು ನೀಡಿದ್ದ ಮಹಿಳೆಯ ಸಾವಿನ ಕುರಿತು ತನಿಖೆಗೆ ರಾಜ್ಯ ಮಹಿಳಾ ಆಯೋಗ ಆಗ್ರಹ - LADY DEATH CASE

Last Updated : Sep 3, 2024, 10:55 AM IST

ABOUT THE AUTHOR

...view details