ಮಂಗಳೂರು: ನಗರದಲ್ಲಿ ಓಡಾಟ ನಡೆಸುವ ಸಿಟಿ ಬಸ್‌ಗಳನ್ನು ಹೊರತುಪಡಿಸಿ ಎಕ್ಸ್‌ಪ್ರೆಸ್, ಕಾಂಟ್ರಾಕ್ಟ್ ಕ್ಯಾರೇಜ್, ಸರ್ವಿಸ್ ಬಸ್‌ಗಳು ಕಡ್ಡಾಯವಾಗಿ ಬಾಗಿಲು ಅಳವಡಿಸಿ ಕಾರ್ಯಾಚರಣೆ ನಡೆಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಗಡುವು ವಿಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈಗಾಗಲೇ ಸ್ವಯಂಚಾಲಿತ ಬಾಗಿಲನ್ನು ಹೊಂದಿರುವ ಬಸ್‌ಗಳು ಕಡ್ಡಾಯವಾಗಿ ಇಂದಿನಿಂದಲೇ ಈ ಆದೇಶವನ್ನು ಪಾಲಿಸ ಬೇಕು. ಬಾಗಿಲನ್ನು ತೆಗೆದು ಹಾಕಿರುವ ಮತ್ತು ಬಾಗಿಲು ಇಲ್ಲದ ಬಸ್‌ಗಳಿಗೆ ತಕ್ಷಣ ಬಾಗಿಲು ಅಳವಡಿಸಬೇಕು. ಡಿ.10ರೊಳಗೆ ಕಡ್ಡಾಯವಾಗಿ ಈ ಆದೇಶವನ್ನು ಬಸ್ ಮಾಲೀಕರು ಅನುಷ್ಠಾನಗೊಳಿಸಬೇಕು. ತಪ್ಪಿದಲ್ಲಿ ಸಾರಿಗೆ ನಿಯಮದ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಮುಲ್ಲೈ ಮುಗಿಲನ್ ಎಚ್ಚರಿಸಿದರು.
ಸಂಚಾರದ ವೇಳೆ ಎಲ್ಲ ಬಸ್‌ಗಳಲ್ಲೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ಬಾಗಿಲು ಹಾಕಿಕೊಳ್ಳುವುದು ಕಡ್ಡಾಯ ವಾಗಿದೆ. ಇದರ ಬಗ್ಗೆ ಹಲವು ಬಾರಿ ಸೂಚನೆ ನೀಡಿದರೂ ಪಾಲನೆಯಾಗುತ್ತಿಲ್ಲ. ಹೀಗಾಗಿ ತಕ್ಷಣದಿಂದಲೇ ಬಾಗಿಲು ಅಳವಡಿಸಲು ಎಲ್ಲ ಖಾಸಗಿ ಬಸ್‌ಗಳು ಕ್ರಮ ಕೈಗೊಳ್ಳಬೇಕು. ನಗರ ಸಾರಿಗೆ ಬಸ್‌ಗಳಿಗೆ ಬಾಗಲು ಅಳವಡಿಕೆ ಕುರಿತಂತೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೆಎಸ್‌ಆರ್‌ಟಿಸಿಗೆ ಹೊಸ ರೂಟ್ ಪರ್ಮಿಟ್ ನೀಡುವುದಕ್ಕೆ ವಿರೋಧ: ಮಂಗಳೂರು-ಕಾರ್ಕಳ, ಬಜಪೆ-ತಲಪಾಡಿ ಸೇರಿ ದಂತೆ ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆ ನೀಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮನವಿ ಮಾಡಿದರು. ಇದಕ್ಕೆ ಖಾಸಗಿ ಬಸ್ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲೀಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಕಾಲಾವಕಾಶ ನೀಡುವಂತೆ ವಿನಂತಿಸಿದರು.