ಬೆಳಗಾವಿ:ಹೆಚ್.ಡಿ.ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗುವುದೇ ಅನುಮಾನ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಚರ್ಚೆ ಮಾಡುತ್ತೇನೆಂದಿದ್ದರು. ಕಳೆದ ಬಾರಿಯೂ ಚರ್ಚೆಗೆ ಕರೆದಾಗ ಬರಲೇ ಇಲ್ಲ ಆಸಾಮಿ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಎಲ್ಲ ಮಹಿಳೆಯರಿಗೆ ಇದು ಸ್ವಾಭಿಮಾನದ ಪ್ರಶ್ನೆ. ಇವರಿಗೆ ತಕ್ಕ ಪಾಠ ಕಲಿಸಲು ಎಲ್ಲರೂ ಪ್ರತಿಯೊಂದು ತಾಲೂಕಿನಲ್ಲಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಬಳಿಕ ರಮೇಶ್ ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ಅವರು ನನ್ನ ಲೇವಲ್ ಅಲ್ಲ. ನನ್ನ ಲೇವಲ್ ಇದ್ದವರ ಬಗ್ಗೆ ಮಾತ್ರ ಮಾತನಾಡುವೆ ಎಂದರು. ನಂತರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಬೆಂಗಳೂರು ನೀರಿನ ಸಮಸ್ಯೆಗೆ ನಿಮ್ಮ ಕೊಡುಗೆ ಏನು? ಮಹಾದಾಯಿ ವಿಚಾರದಲ್ಲಿ ಸಂಭ್ರಮ ಮಾಡಿದರು. ಯಾಕೆ ಇನ್ನೂ ಅನುಮತಿ ಕೊಡಿಸಲು ಸಾಧ್ಯವಾಗಿಲ್ಲ. ಯಾವುದಾದ್ರು ಕೋರ್ಟ್ ಅಡ್ಡ ಬಂದಿದೆಯಾ..? 14 ಜನ ಅಭ್ಯರ್ಥಿಗಳನ್ನು ಯಾಕೆ ಬದಲಾವಣೆ ಮಾಡಿದರು. ಕುರುಬರಿಗೆ, ಅಲ್ಪಸಂಖ್ಯಾತರಿಗೆ ಒಂದೂ ಸೀಟ್ ಕೊಟ್ಟಿಲ್ಲ. ಐದು ಸಲ ಗೆದ್ದ ಅನಂತಕುಮಾರ್ ಹೆಗಡೆ ಬದಲಾವಣೆ ಮಾಡಿದ್ದಿರಿ ಎಂದ ಅವರು ಈ ಎಲ್ಲಾ ದೃಷ್ಟಿಯಿಂದ ಬಿಜೆಪಿ ಚುನಾವಣೆಯಲ್ಲಿ ಸೋಲುತ್ತದೆ ಎಂದು ಭವಿಷ್ಯ ನುಡಿದರು.