ಬೆಂಗಳೂರು:ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬೆಂಗಳೂರನ್ನು ಬಹಳ ಮೆಚ್ಚಿಕೊಂಡಿದ್ದರು. ಬೆಂಗಳೂರಿಗೂ ಅವರಿಗೂ ತುಂಬಾ ಹಿಂದಿನಿಂದಲೂ ಒಡನಾಟವಿತ್ತು. ಬೆಂಗಳೂರಿಗೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದ್ದಾರೆ.
ಮಾಜಿ ಪ್ರಧಾನಿಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ಕರ್ನಾಟಕದಲ್ಲಿ 2008ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆಗ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದರು. 2008ರ ಮೇ ತಿಂಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು ಎಂದು ತಿಳಿಸಿದ್ದಾರೆ.
2011ರಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ ನಗರದ ಮೊದಲ ಮೆಟ್ರೋ ರೈಲಿಗೆ ಚಾಲನೆ ನೀಡಿದ ಕೀರ್ತಿ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಆ ಸಂದರ್ಭದಲ್ಲಿ ಬೆಂಗಳೂರಿನ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಮಾಡಿದ ಮನಮೋಹನ್ ಸಿಂಗ್, ರಾಷ್ಟ್ರದ ಪ್ರತಿಯೊಂದು ನಗರವು ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೆಜ್ಜೆಯಿಡುತ್ತಿದೆ. ಈ ನಗರದ ಹಿಂದಿನ ಯಶಸ್ಸನ್ನು ಗಮನದಲ್ಲಿಟ್ಟುಕೊಂಡೇ ದೃಢ, ಸಕಾರಾತ್ಮಕ ಹೆಜ್ಜೆಗಳನ್ನಿಡುತ್ತಿವೆ ಎಂದರು.