ನಮ್ಮ ಯೋಜನೆಗಳಿಂದ ಜನರ ಕೈಯಲ್ಲಿ ಹಣ ಹರಿದಾಡುತ್ತಿದೆ, ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ: ಡಿಸಿಎಂ ಡಿ ಕೆ ಶಿವಕುಮಾರ್ ರಾಮನಗರ:ನಾನು ಕಾರ್ಯಕ್ರಮಕ್ಕೆ ಬರುವಾಗ ಕೆಲವು ಮಹಿಳೆಯರು ನನ್ನನ್ನು ಅಡ್ಡಹಾಕಿ ನಮಗೆ ಎಲ್ಲ ಯೋಜನೆ ಸಿಗುತ್ತಿವೆ ಎಂದು ಆಶೀರ್ವಾದ ಮಾಡಿದರು, ಇದು ನನ್ನ ಭಾಗ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪ್ರವಾಸ ಮಾಡಿದ ಎಲ್ಲೆಡೆ ಇದೇ ರೀತಿ ಮಹಿಳೆಯರು ಸಾಗರೋಪಾದಿಯಲ್ಲಿ ಸೇರುತ್ತಿದ್ದಾರೆ ಎಂದರು.
ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಇದನ್ನು ನೋಡಿ ಅರಳಿದ ಕಮಲದ ಹೂವು ಉದುರಿ ಹೋಯಿತು, ಕುಮಾರಣ್ಣ ತೆನೆ ಎಸೆದು ಬಿಜೆಪಿ ಸೇರಿಕೊಂಡರು. ಕರ್ನಾಟಕ ಸಮೃದ್ಧವಾಯಿತು, ಕರ್ನಾಟಕ ಪ್ರಬುದ್ಧವಾಯಿತು. ನಮ್ಮ ಯೋಜನೆಯಿಂದ ಮಹಿಳೆಯರು ಉಚಿತ ಪ್ರಯಾಣ ಮಾಡಿ ದೇವಾಲಯಗಳ ಹುಂಡಿ ತುಂಬುತ್ತಿವೆ. ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ. ನಾನು ಚುನಾವಣೆಗೂ ಮುನ್ನವೇ ಬಂದು ಇಲ್ಲಿ ಮಾತನಾಡಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ - ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದರು.
ನಮ್ಮ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡಿದರು. ಅದರಲ್ಲಿ ಯಾವುದಾದರೂ ಒಂದು ಸತ್ಯವಾಗಿದೆಯಾ?. ಸಾಯಿಬಾಬಾ ಅವರು ಒಮ್ಮೆ ಕಾರ್ಯಕ್ರಮದಲ್ಲಿ ದುಡ್ಡು ಮತ್ತು ಬ್ಲಡ್ ಒಂದೇ ಕಡೆ ಇರಬಾರದು ಅವುಗಳು ಚಲನೆಯಲ್ಲಿರಬೇಕು ಎಂದು ಹೇಳಿದ್ದರು. ಅದರಂತೆ ನಮ್ಮ ಯೋಜನೆಗಳಿಂದ ಜನರ ಕೈಯಲ್ಲಿ ಹಣ ಹರಿದಾಡುತ್ತಿದೆ. ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ. ನಮಗೆ ಸಿಕ್ಕ ಅವಕಾಶದಲ್ಲಿ ನಾವು ನಿಮ್ಮ ಸೇವೆ ಮಾಡಿ ನಿಮ್ಮ ಋಣ ತೀರಿಸಿದ್ದೇವೆ ಎಂದರು.
ಚನ್ನಪಟ್ಟಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ನಾನು ಇಂಧನ ಸಚಿವನಾಗಿದ್ದಾಗ ಎಲ್ಲಾ ಕಡೆ ಹೆಚ್ಚಿನ ಟ್ರಾನ್ಸ್ ಫಾರ್ಮರ್ಗಳನ್ನು ನೀಡಿದ್ದೇನೆ. ಆ ಮೂಲಕ ವಿದ್ಯುತ್ ಸಮಸ್ಯೆ ಬಗೆಹರಿಸಲಾಗಿದೆ. ಇಂತಹ ವ್ಯವಸ್ಥೆ ಬೇರೆ ಜಿಲ್ಲೆಗಳಲ್ಲಿ ಇಲ್ಲ. ಕಾರಣ ನೀವು ಡಿ.ಕೆ. ಸುರೇಶ್ ಅವರಿಗೆ ಕೊಟ್ಟ ಶಕ್ತಿ. ನಿನ್ನೆ ಕುಣಿಗಲ್ನಲ್ಲಿ 250ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ಮಾಡಿ ಬಂದಿದ್ದೇನೆ. ರೈತರಿಗೆ ಉಳುಮೆ ಮಾಡಲು ಭೂಮಿ ಕೊಟ್ಟಿದ್ದು, ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಕೊಟ್ಟಿದ್ದು, ಹಳ್ಳಿಗಳಲ್ಲಿ ಉಚಿತವಾಗಿ ಮನೆ, ಉಚಿತವಾಗಿ 5 ಕೆ.ಜಿ ಅಕ್ಕಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ವಾರ್ಷಿಕವಾಗಿ ಬಡವರಿಗೆ 50 ರಿಂದ 60 ಸಾವಿರ ಉಳಿತಾಯ ಮಾಡುವಂತಹ ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ. ರಾಜಕಾರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಯಾರೇ ಒಂದಾಗಲಿ, ನೀವು ನಿಮ್ಮ ಬದುಕಿನ ಬಗ್ಗೆ ಆಲೋಚಿಸಿ. ನೀವು ಮುಂದಿನ ಚುನಾವಣೆಯಲ್ಲಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಿ. ಇದಕ್ಕಾಗಿ ನೀವು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲಾ ಪಕ್ಷದ ಜನರನ್ನು ಮನವೊಲಿಸಿ ಈ ಕೈಗೆ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ನನಗೂ ಒಂದು ಕಾಲದಲ್ಲಿ ಚನ್ನಪಟ್ಟಣದಿಂದ ವಿಧಾನಸಭೆಗೆ ಸ್ಪರ್ಧೆ ಮಾಡಬೇಕು ಎನ್ನುವ ಆಸೆ ಇತ್ತು. ವಯಸ್ಸು ಯಾರಿಗೂ ಮುಂದಕ್ಕೆ ಹೋಗುವುದಿಲ್ಲ. ಮುಂದಿನ ಅವಧಿಯೂ ಸೇರಿ 10 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಜೆಡಿಎಸ್ ಮತ್ತು ಬಿಜೆಪಿಗೆ ಬಡವರ ಮೇಲೆ, ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಲ್ಲ. ನಂಬಿಕೆ ಇದ್ದಿದ್ದರೆ ಚನ್ನಪಟ್ಟಣದ ಸಮಾವೇಶಕ್ಕೆ ಬಂದು ತಾಯಂದಿರ ಆಶೀರ್ವಾದ ಪಡೆಯುತ್ತಿದ್ದರು ಎಂದರು.
ಇದನ್ನೂ ಓದಿ:ಕೃಷಿ ಇಲಾಖೆಯಲ್ಲಿ 750 ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಚಲುವರಾಯಸ್ವಾಮಿ