ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಸ್ತೆಗುಂಡಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು. ಈಗಾಗಲೇ "ರಸ್ತೆ ಗುಂಡಿ ಗಮನ" ಎನ್ನುವ ಆಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಗಮನ ಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಸೂಚನೆ ನೀಡಿದ್ದಾರೆ.