ನವದೆಹಲಿ/ಬೆಂಗಳೂರು: "ಸಂಪುಟ ವಿಸ್ತರಣೆ ಆ ಸಂದರ್ಭ ಬಂದಾಗ ಆಗುತ್ತದೆ. ಈಗ ಆ ಸಂದರ್ಭ ಒದಗಿ ಬಂದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, "ಒಂದು ಸಚಿವ ಸ್ಥಾನ ಖಾಲಿ ಇದ್ದು, ಅದನ್ನು ತುಂಬುವ ಬಗ್ಗೆ ಚರ್ಚೆ ನಡೆದಿಲ್ಲ. ಮಾಧ್ಯಮಗಳ ಮುಂದೆ ರಾಜಕೀಯ ಚರ್ಚೆ ಮಾಡುವುದು ಯಾವ ಪಕ್ಷದವರಿಗೂ ಹಾಗೂ ಯಾರಿಗೂ ಸೂಕ್ತವಾದುದಲ್ಲ" ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat) ಕೆಪಿಸಿಸಿ ಅಧ್ಯಕ್ಷಗಾದಿಗೆ ನಾನೂ ಆಕಾಂಕ್ಷಿ ಎನ್ನುವ ಸಚಿವ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಅವರ ಹೆಸರು ಮುನ್ನೆಲೆಗೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಮಾಧ್ಯಮ ಮುಂದೆ ಚರ್ಚೆ ನಡೆಸುವುದು ಸೂಕ್ತವಲ್ಲ" ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸಾಧನ ಸಮಾವೇಶವು ಸಿದ್ದರಾಮಯ್ಯ ಅವರ ಸಮಾವೇಶವಾಗಿ ಬದಲಾಗಿದೆ ಎನ್ನುವ ಕುರಿತು ಅಸಮಾಧಾನ ಹೊಂದಿರುವ ಪತ್ರ ಎಐಸಿಸಿಗೆ ಬಂದಿದೆ ಎಂಬ ಬಗ್ಗೆ ಕೇಳಿದಾಗ, "ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಆದರೆ, ಸಮಾವೇಶವನ್ನು ಯಾವ ಕಾರಣಕ್ಕೆ ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ನನಗೆ ಮೊದಲೇ ತಿಳಿಸಿದ್ದಾರೆ. ಮಿಕ್ಕ ವಿಚಾರಗಳು ನನಗೆ ಗೊತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿಗಳು ಹಾಗೂ ನಾನು ಭೇಟಿ ಮಾಡಿ ಮೂರು ನಾಲ್ಕು ದಿನಗಳಾಗಿವೆ. ಪಕ್ಷದ ಭಾಗವಹಿಸುವಿಕೆ ಖಂಡಿತ ಇದ್ದೇ ಇರುತ್ತದೆ" ಎಂದು ತಿಳಿಸಿದರು.
ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಭೇಟಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ಬಗ್ಗೆ ಮಾತನಾಡಿ, "ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಪಕ್ಷದ ಅಧ್ಯಕ್ಷರಾಗಿ ಮಹಾತ್ಮ ಗಾಂಧಿಯವರು ಅಧಿಕಾರ ವಹಿಸಿಕೊಂಡು ನೂರು ವರ್ಷಗಳಾಗಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಅವರನ್ನು ಭೇಟಿಯಾಗಿದ್ದೆ" ಎಂದರು.
"ಡಿಸೆಂಬರ್ 28 ರಂದೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ. ಆದ ಕಾರಣ ಈ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಬಳಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ ತೆಗೆದುಕೊಂಡ ಸಲಹೆ, ಸೂಚನೆಗಳನ್ನು ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಚರ್ಚೆ ಮಾಡಿದೆ. ಸುಮಾರು 300ಕ್ಕೂ ಹೆಚ್ಚು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಾವು ಈ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯಬೇಕು ಎನ್ನುವ ಅಭಿಲಾಷೆಯನ್ನು ಹೊಂದಿದ್ದೇವೆ. ಈ ಬಗ್ಗೆ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ತಿಳಿಸುವುದಾಗಿ ಅವರು ಹೇಳಿದ್ದಾರೆ. ನಾನು ಮತ್ತು ಮುಖ್ಯಮಂತ್ರಿ ಇಬ್ಬರು ಒಟ್ಟಿಗೆ ಈ ಬಗ್ಗೆ ಚರ್ಚೆ ಮಾಡಿದ್ದೇವೆ" ಎಂದರು.
ನೀರಾವರಿ ವಿಚಾರ ಮನವಿ ಸಲ್ಲಿಸಲು ಪ್ರಧಾನಿ ಭೇಟಿ:ಪ್ರಧಾನಿ ಮೋದಿ ಅವರ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿ, "ರಾಜ್ಯದ ವಿಚಾರಗಳು ಹಾಗೂ ಮುಖ್ಯವಾಗಿ ನೀರಾವರಿ ವಿಚಾರವಾಗಿ ಮನವಿಯನ್ನು ಸಲ್ಲಿಸಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಾಗುತ್ತಿದೆ. ಗುರುವಾರದಂದು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಹಾಗೂ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಕಳಸಾ - ಬಂಡೂರಿ ವಿಚಾರವಾಗಿ ಪರಿಸರ ಇಲಾಖೆಯಿಂದ ಬಾಕಿ ಇರುವ ಅನುಮತಿ ಹಾಗೂ ಅಡೆತಡೆಗಳನ್ನು ನಿವಾರಿಸಬೇಕು ಎಂದು ಮನವಿ ಸಲ್ಲಿಸಿದ್ದೆವು. ಇದಕ್ಕೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ವನ್ಯಜೀವಿ ಮಂಡಳಿಗೆ ಪ್ರಧಾನಿ ಅವರೇ ಅಧ್ಯಕ್ಷರಾಗಿರುವ ಕಾರಣಕ್ಕೆ ಅವರಿಗೂ ಮನವಿ ಸಲ್ಲಿಸಲಾಗುವುದು" ಎಂದು ಹೇಳಿದರು.
"ರಾಂಚಿಯಲ್ಲಿ ನಡೆದ ಹೇಮಂತ್ ಸೊರೇನ್ ಅವರ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ರಾಹುಲ್ ಗಾಂಧಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ನಾನು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಇಂಡಿಯಾ ಒಕ್ಕೂಟದ ನಾಯಕರು ಭಾಗವಸಿ ಹೇಮಂತ್ ಅವರಿಗೆ ಶುಭ ಕೋರಿದೆವು" ಎಂದು ತಿಳಿಸಿದರು.
ಇದನ್ನೂ ಓದಿ:ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಪ್ರಮಾಣ ವಚನ ಸ್ವೀಕಾರ: ಸಮಾರಂಭಕ್ಕೆ ಸಾಕ್ಷಿಯಾದ ಡಿಕೆಶಿ