ರಾಮನಗರ : ಕುಮಾರಸ್ವಾಮಿ, ನಾನು ಕೃಷಿ ಜತೆಗೆ ಉದ್ಯಮವನ್ನು ನಡೆಸುತ್ತಿದ್ದೇನೆ. ನೀನು ಮತ್ತು ನಿಮ್ಮ ಕುಟುಂಬದವರು ಯಾವ ಈರುಳ್ಳಿ, ಆಲೂಗಡ್ಡೆ ಬೆಳೆದು ಸಾವಿರಾರು ಕೋಟಿ ಸಂಪಾದಿಸಿದ್ದೀರಿ? ನೀನು ಹಿಟ್ ಅಂಡ್ ರನ್, ಬ್ಲಾಕ್ ಮೇಲರ್ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಹರಿಹಾಯ್ದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಇಂದು ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು, ''ಕುಮಾರಣ್ಣ ನೀನು ನನ್ನ ಆಸ್ತಿ ಬಗ್ಗೆ ಚರ್ಚೆ ಮಾಡುವ ಬದಲು ಮೊದಲಿನಿಂದಲೂ ಚರ್ಚೆ ಮಾಡು. ನಿನ್ನ ಸಹೋದರ ಬಾಲಕೃಷ್ಣಗೌಡ ಅವರ ಕುಟುಂಬ, ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಯಾಗಿ ಎಷ್ಟೆಷ್ಟು ಜಮೀನು ಹೊಂದಿದ್ದಾರೆ ಎಂದು ನೀವು ರಾಮನಗರದಲ್ಲಿ ಉತ್ತರ ನೀಡಬೇಕು. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಇದ್ದಾನೆ, ಯಾವ ಈರುಳ್ಳಿ, ಆಲೂಗಡ್ಡೆಯಲ್ಲಿ ಅದು ಸಂಪಾದನೆ ಆಯ್ತು? ಎಂದು ಲೆಕ್ಕ ಕೊಡಬೇಕು” ಎಂದು ಸವಾಲೆಸೆದರು.
ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ನಾನು ಉದ್ದಿಮೆದಾರ ಎಂದು ಹೇಳಿಕೊಂಡಿದ್ದೇನೆ. ನೀನು ಆ ರೀತಿ ಹೇಳಿಲ್ಲ. ನಾನು ಪಂಚೆಯುಟ್ಟು ಹೊಲ ಉಳುಮೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದೀಯ. ಮಣ್ಣಿನ ಮಗ ಎಂದು ಹೇಳಿದ್ದೀಯ. ನಿಮ್ಮ ತಂದೆ ಮಣ್ಣಿನ ಮಗನಾಗಿರಬಹುದು. ಆದರೆ ನೀವಲ್ಲ, ನನ್ನ ಮೇಲೆ, ನನ್ನ ಧರ್ಮಪತ್ನಿ, ನನ್ನ ಸಹೋದರಿ, ನನ್ನ ಸಹೋದರನ ಮೇಲೆ ನೀವು ಕೇಸ್ ದಾಖಲಿಸಿ ಏನು ಮಾಡಿದಿರಿ? ಏನು ಮಾಡಲು ಆಗಿಲ್ಲ ಎಂದರು.
ಮಿಲಿಟರಿಯವರು ಬಂದು ನನ್ನನ್ನು ಕರೆದುಕೊಂಡು ಹೋಗಲಿದ್ದಾರೆ ಎಂದು ನೀನು ಹೇಳಿದ್ದೀಯ. ಹಾಗಿದ್ದರೆ ನಾನು ಜೈಲಲ್ಲಿ ಇದ್ದಾಗ ಯಾಕೆ ಬಂದು ನನ್ನನ್ನು ನೋಡಿದೆ? ನನ್ನ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅದು ಗೊತ್ತಿದೆಯೇ? ನನ್ನ ಕುಟುಂಬದವರ ಮೇಲೆ ಹಾಕಿಸಿದ್ದ ಕೇಸು ವಜಾ ಆಗಿದೆ ಗೊತ್ತಿದೆಯಾ? ಎಂದು ಕುಟುಕಿದರು.
''ನಾನು ನಿನ್ನ ಡಿನೋಟಿಫಿಕೇಶನ್ ಪ್ರಕರಣ ಇನ್ನೂ ಚರ್ಚೆ ಮಾಡಿಲ್ಲ. ನಿನ್ನ ಗಣಿ ಕೇಸ್ ಇನ್ನೂ ಚರ್ಚೆ ಮಾಡಿಲ್ಲ. ನಿನ್ನ ಕುಟುಂಬದವರ ಆಸ್ತಿ ಬಗ್ಗೆ ವಿವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪಟ್ಟಿ ಬಿಡುಗಡೆ ಮಾಡುತ್ತೇನೆ'' ಎಂದು ಡಿಕೆಶಿ ಸವಾಲೆಸೆದರು.
ಹುಟ್ಟಿದ ಕರುಗಳೆಲ್ಲ ಬಸವ ಆಗಲ್ಲ. ಅದೇ ರೀತಿ ಎಲ್ಲರೂ ರೈತನ ಮಗ ಆಗುವುದಿಲ್ಲ. ನೀವು ರೈತನ ಮಗ ಎಂದು ಹೇಳುತ್ತೀರಿ. ನಮ್ಮ ಹಳ್ಳಿ ಕಡೆ ಒಂದು ಮಾತು ಹೇಳುತ್ತಾರೆ. ‘ಹುಟ್ಟಿದವೆಲ್ಲಾ ಬಸವ ಆಗುವುದಿಲ್ಲ’ ಎಂದು. ಅಂದರೆ ಹಳ್ಳಿಗಳಲ್ಲಿ ಹುಟ್ಟುವ ಎಲ್ಲಾ ಕರುಗಳು ಬಸವ ಆಗಲು ಸಾಧ್ಯವಿಲ್ಲ. ಅದೇ ರೀತಿ ಎಲ್ಲರೂ ರೈತರ ಮಕ್ಕಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ರೈತರ ರಕ್ಷಣೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ಜಮೀನು ನೀಡಿದ್ದೇವೆ. ಅರಣ್ಯ ಕಾಯ್ದೆಯಲ್ಲಿ ರೈತರಿಗೆ ಜಮೀನು ನೀಡಿದ್ದೇವೆ. ಕುಮಾರಸ್ವಾಮಿ ಅವರೇ, ನೀವು ಒಂದು ಸಭೆ ಮಾಡಿ ಒಬ್ಬ ರೈತನಿಗೆ ಬಗರ್ ಹುಕುಂ ಜಮೀನು ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
''ನಾನು ಚನ್ನಪಟ್ಟಣದ ವಿವಿಧ ಕಡೆಗಳಲ್ಲಿ ಸರ್ಕಾರವನ್ನು ಜನರ ಮನೆ ಬಾಗಿಲಿಗೆ ಕರೆದುಕೊಂಡು ಬಂದು ಅವರ ಕಷ್ಟ ಕೇಳಿದ್ದೇನೆ. ಈ ಕ್ಷೇತ್ರದಲ್ಲಿ 22 ಸಾವಿರ ಜನ ತಮ್ಮ ಕಷ್ಟ ಬಗೆಹರಿಸುವಂತೆ ಅರ್ಜಿ ನೀಡಿದ್ದಾರೆ. ನಿವೇಶನ, ಮನೆ, ಪಿಂಚಣಿ, ಜಮೀನಿನ ಖಾತೆ ಇಲ್ಲ ಎಂದು ಅರ್ಜಿ ಕೊಟ್ಟಿದ್ದಾರೆ. ಹಾಗಿದ್ದರೆ ನೀವು ಯಾವ ಆಡಳಿತ ಮಾಡಿದ್ದೀರಿ? ಯಾರಿಗೆ ಸಹಾಯ ಮಾಡಿದ್ದೀರಿ? ಇದಕ್ಕೆ ಈ ಕ್ಷೇತ್ರದ ಜನ ಮುಂದಿನ ಉಪಚುನಾವಣೆಯಲ್ಲಿ ಉತ್ತರ ನೀಡಬೇಕು. ನೀವೆಲ್ಲರೂ ಉತ್ತರ ನೀಡುತ್ತೀರಿ ಅಲ್ಲವೇ? ಬೆಂಗಳೂರು ದಕ್ಷಿಣ ನಿಮ್ಮ ಜಿಲ್ಲೆಯಲ್ಲವೇ? ಆ ಸ್ವಾಭಿಮಾನ ನಿಮ್ಮದಲ್ಲವೇ?” ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಹಿಟ್ ಅಂಡ್ ರನ್, ಬ್ಲಾಕ್ ಮೇಲರ್- ನನ್ನ ಅಧ್ಯಕ್ಷತೆಯಲ್ಲಿ ನನ್ನ ಪಕ್ಷಕ್ಕೆ 136 ಸೀಟು ಬಂದಿದೆ. ನಿನ್ನ ಅಧ್ಯಕ್ಷತೆಯಲ್ಲಿ ನಿನ್ನ ಪಕ್ಷಕ್ಕೆ 19 ಸೀಟು ಬಂದಿದೆ. ಈಗ ನಿನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದೀಯ. ಕುಮಾರಸ್ವಾಮಿ ನೀನು ಕೇವಲ ಹಿಟ್ ಅಂಡ್ ರನ್. ನೀನು ಬ್ಲಾಕ್ ಮೇಲ್ ಕುಮಾರಸ್ವಾಮಿ. ಎಲ್ಲರನ್ನು ಹೆದರಿಸಿದಂತೆ ಬಿಜೆಪಿಯವರನ್ನು ಹೆದರಿಸಲು ಹೋದೆ. ಪಾದಯಾತ್ರೆ ವಿಚಾರವಾಗಿ ಜಿ. ಟಿ ದೇವೇಗೌಡರ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನಿನ್ನ ಮಗನ ಕೈಯಲ್ಲಿ ಒಂದು ಹೇಳಿಕೆ ಕೊಡಿಸಿದೆ. ನೀನು ಒಂದು ಹೇಳಿಕೆ ನೀಡಿದೆ. ಈ ನಾಟಕ ಏಕೆ?” ಎಂದು ಪ್ರಶ್ನಿಸಿದರು. ಪಾದಯಾತ್ರೆಗೆ ಬರಲ್ಲ ಎಂದು ಹೇಳಿದವನು, ಈಗ ಏಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೀಯಾ? ಕೇವಲ ನಿನ್ನ ಅಧಿಕಾರಕ್ಕೋಸ್ಕರ. ನಿನ್ನ ಪಕ್ಷವನ್ನು ಮುಳುಗಿಸಲು ಹೊರಟಿದ್ದೀಯಾ” ಎಂದು ವಾಗ್ದಾಳಿ ನಡೆಸಿದರು.