ಬೆಂಗಳೂರು:ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಜನಕಲ್ಯಾಣ ಸಮಾವೇಶದಲ್ಲಿ ಭಾಗವಹಿಸುತ್ತಿದ್ದೇನೆ, ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕರಾಗಿ ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಆದ್ದರಿಂದ ಪಕ್ಷದ ನೇತೃತ್ವದಲ್ಲೇ ಸಮಾವೇಶ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಅವರು, ಹಾಸನದಲ್ಲಿ ಆಯೋಜಿಸಲಾಗಿರುವ ಜನಕಲ್ಯಾಣ ಸಮಾವೇಶದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷ ಸುಧೀರ್ಘ ಇತಿಹಾಸ ಹೊಂದಿರುವ ದೊಡ್ಡ ಪಕ್ಷ. ಕಾಂಗ್ರೆಸ್ ಜತೆ ಯಾವುದೇ ಸಂಘ ಸಂಸ್ಥೆಗಳು ಸೇರಿಕೊಳ್ಳಬಹುದು. ಆದರೆ ಕಾಂಗ್ರೆಸ್ ಬೇರೆಯವರ ಜತೆ ಸೇರಿಕೊಳ್ಳುವುದಿಲ್ಲ. ಪಕ್ಷದ ನೇತೃತ್ವದಲ್ಲಿ ಜನಕಲ್ಯಾಣ ಸಮಾವೇಶ ನಡೆಯಲಿದೆ. ನಮ್ಮ ಸರ್ಕಾರದಿಂದ ಆಗಿರುವ ಅಭಿವೃದ್ಧಿ, ಸಾಧನೆಗಳು ಹಾಗೂ ಬಿಜೆಪಿ - ಜೆಡಿಎಸ್ ಪಕ್ಷಗಳ ಸುಳ್ಳುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ಸಮಾವೇಶ ಮಾಡಲಾಗುತ್ತಿದೆ ಎಂದರು.
ಈ ತೀರ್ಮಾನದಿಂದ ಸಿದ್ದರಾಮಯ್ಯನವರ ಬೆಂಬಲಿಗರಿಗೆ ಅಸಮಾಧಾನವಾಗಿದೆ ಎಂಬುದರ ಕುರಿತು ಉತ್ತರಿಸಿ, ಇಲ್ಲಿ ಯಾರೂ ಶಿವಕುಮಾರ್ ಬೆಂಬಲಿಗರು, ಸಿದ್ದರಾಮಯ್ಯನವರ ಬೆಂಬಲಿಗರಿಲ್ಲ. ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಗರು ಎಂದು ಹೇಳಿದರು.
ಇದನ್ನೂ ಓದಿ:ಹೊಂದಾಣಿಕೆ ರಾಜಕೀಯಕ್ಕೂ ಇತಿಶ್ರೀ, ಯತ್ನಾಳ್ ಬಗ್ಗೆ ವರಿಷ್ಠರು ತೀರ್ಮಾನಿಸ್ತಾರೆ: ವಿಜಯೇಂದ್ರ