ಕರ್ನಾಟಕ

karnataka

ETV Bharat / state

ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ, ಜಾಗೃತರಾಗಿರುವಂತೆ ದೇವೇಗೌಡರಿಂದ ಸಂದೇಶ: ಡಿ.ಕೆ. ಶಿವಕುಮಾರ್​ - D K SHIVAKUMAR

ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ತಿರುಗೇಟು ನೀಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್​
ಡಿಸಿಎಂ ಡಿ.ಕೆ. ಶಿವಕುಮಾರ್​ (ETV Bharat)

By ETV Bharat Karnataka Team

Published : Nov 11, 2024, 3:14 PM IST

ಬೆಂಗಳೂರು:ಗ್ಯಾರಂಟಿ ಯೋಜನೆ ನಿಲ್ಲಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಜನರು ಜಾಗೃತರಾಗಿರಬೇಕು ಎಂದು ದೇವೇಗೌಡರು ಸಂದೇಶ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಯೋಜನೆ ನಿಲ್ಲಲಿದೆ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ವಿರೋಧ ಪಕ್ಷದವರ ಹಣೆಯಲ್ಲಿ ಬರೆದಿಲ್ಲ. ನಮ್ಮ ತಾಯಂದಿರ ಬದುಕು ಹಾಗೂ ಸಂಸಾರ ಉತ್ತಮವಾಗಿ ಸಾಗಲಿ ಎಂದು ನಾವು ಗೃಹಲಕ್ಷ್ಮಿ ಹಣ ನೀಡುತ್ತಿದ್ದೇವೆ. ಇದನ್ನು ತಪ್ಪಿಸಲು ಬಿಜೆಪಿ ಹಾಗೂ ಜೆಡಿಎಸ್ ಹೊರಟಿವೆ. ಜನ ಹುಷಾರಾಗಿರಬೇಕು ಎಂದು ತಿಳಿಸಿದರು.

ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ:ರಾಜ್ಯದ ಜನ ನಮ್ಮ ಗ್ಯಾರಂಟಿ ಯೋಜನೆಗಳು ಹಾಗೂ ಆಡಳಿತವನ್ನು ಒಪ್ಪಿದ್ದು, ಉಪಚುನಾವನೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಮೂರು ಕ್ಷೇತ್ರಗಲ್ಲಿ ಪ್ರಚಾರ ಮುಗಿಸಿದ್ದೇವೆ. ಬಿಜೆಪಿ ಏನೇ ತಂತ್ರ ಪ್ರಯೋಗಿಸಿದರೂ ಜನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದಂತೆ ಈ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರೋ ಪ್ರಧಾನಿ ದಾರಿತಪ್ಪಿಸಿದ್ದಾರೆ:ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಬಗ್ಗೆ ಪ್ರಧಾನಿ ಮೋದಿ ಆರೋಪದ ಬಗ್ಗೆ ಮಾತನಾಡಿ, ಇದು ಸುಳ್ಳು ಆರೋಪ, ಅವರನ್ನು ಯಾರೋ ದಾರಿತಪ್ಪಿಸಿದ್ದಾರೆ. ಈ ವಿಚಾರವಾಗಿ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮುಖ್ಯಮಂತ್ರಿಗಳು ಬಹಿರಂಗ ಸವಾಲು ಹಾಕಿದ್ದಾರೆ. ಇದಕ್ಕಿಂತ ಬೇರೇನು ಬೇಕು? ಎಂದು ಪ್ರಶ್ನಿಸಿದರು.

ದ್ವೇಷ ರಾಜಕಾರಣ ಮಾಡುತ್ತಿರುವುದು ಬಿಜೆಪಿ:ಕೋವಿಡ್ ಅಕ್ರಮ ವಿಚಾರದಲ್ಲಿ ನಿವೃತ್ತ ನ್ಯಾ. ಮೈಕಲ್​ ಡಿ ಕುನ್ಹಾ ಅವರ ಸಮಿತಿ ಸರ್ಕಾರದ ಏಜೆಂಟ್​ನಂತೆ ನಡೆದುಕೊಳ್ಳುತ್ತಿದೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಅವರ ಪರವಾಗಿ ವರದಿ ಕೊಟ್ಟರೆ ಎಲ್ಲವೂ ನ್ಯಾಯಬದ್ಧವಾಗಿರುತ್ತವೆ. ಅವರ ವಿರುದ್ಧವಾಗಿ ನೀಡುವ ವರದಿ ಬಗ್ಗೆ ಹೀಗೆ ಆರೋಪ ಮಾಡುತ್ತಾರೆ. ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಅವರು ಯಾವುದೇ ಆರೋಪ ಮಾಡಿಕೊಳ್ಳಲಿ" ಎಂದು ಕಿಡಿಕಾರಿದರು.

ವಯನಾಡಿನಲ್ಲಿ ಪ್ರಿಯಾಂಕಾ ಗೆಲುವು:ವಯನಾಡಿನ ಉಪಚುನಾವಣೆ ಬಗ್ಗೆ ಮಾತನಾಡಿ, ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಅವರು ಗೆಲ್ಲುವುದು ನಿಶ್ಚಿತ. ಅಲ್ಲಿ ಬೇರೆ ಪಕ್ಷಗಳ ನಾಯಕರು ಕೂಡ ಪ್ರಿಯಾಂಕಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಪ್ರಿಯಾಂಕಾ ಅವರನ್ನು ಸಂಸತ್ ಸದಸ್ಯೆಯಾಗಿ ನೋಡಲು ಬಯಸಿದ್ದಾರೆ. ಅವರು ಹಾಗೂ ರಾಹುಲ್ ಗಾಂಧಿ ಅವರು ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದಾರೆ. ಅಲ್ಲಿನ ಉಪಚುನಾವಣೆ ಏಕಪಕ್ಷೀಯ ಸ್ಪರ್ಧೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ಸರ್ಕಾರ ಖಜಾನೆಯನ್ನು ದಿವಾಳಿ ಮಾಡಿದೆ: ಹೆಚ್.ಡಿ. ದೇವೇಗೌಡ

ABOUT THE AUTHOR

...view details