ಎಸ್ಎಸ್ಎಲ್ಸಿ ಟಾಪರ್ ಶುಭ ಹಾರೈಸಿದ ಡಿಸಿಎಂ (ETV Bharat) ಬೆಂಗಳೂರು: ಸರಕಾರಿ ಶಾಲೆಯಲ್ಲಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಗಳಿಸಿದ ಬಾಗಲಕೋಟೆಯ ಅಂಕಿತಾ ಬಸಪ್ಪ ಕೊಣ್ಣೂರ ಅವರನ್ನು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶುಕ್ರವಾರ ಮೊಬೈಲ್ ಮೂಲಕ ಸಂಪರ್ಕಿಸಿ ಶುಭ ಹಾರೈಸಿದರು.
ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಮೊದಲ ಸ್ಥಾನ ಪಡೆದಿರುವುದು ನನಗೆ ಬಹಳ ಸಂತೋಷ ತಂದಿದ್ದು, ನಿನಗೆ ಶುಭವಾಗಲಿ. ಬೆಂಗಳೂರಿಗೆ ಬಂದಾಗ ತಮ್ಮ ಮನೆಗೆ ಬರಬೇಕೆಂದು ಶಿವಕುಮಾರ್ ಅವರು ಅಂಕಿತಾಗೆ ಆಹ್ವಾನ ನೀಡಿದರು. ಅಲ್ಲದೆ ಅಂಕಿತಾ ತಂದೆ ಬಸಪ್ಪ ಅವರ ಜತೆಯೂ ಮಾತನಾಡಿ ಮಗಳ ಸಾಧನೆಗೆ ಶುಭಾಶಯ ತಿಳಿಸಿದರು.
ಮೇ 9ರಂದು 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಿಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಆದ ಅಂಕಿತಾ ಬಸಪ್ಪ ಕೊಣ್ಣೂರು 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂಕಿತಾ ಹೊರತುಪಡಿಸಿ 7 ವಿದ್ಯಾರ್ಥಿಗಳು 625ಕ್ಕೆ 624ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿನಿ; ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಫಸ್ಟ್ - SSLC TOPPER