ಗಂಗಾವತಿ :ಕನಕಗಿರಿ ಸಮೀಪದ ಬಂಕಾಪುರದ ಅರಣ್ಯ ಇಲಾಖೆಯ ತೋಳಧಾಮಕ್ಕೆ ಭಾನುವಾರ ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಭೇಟಿ ನೀಡಿ ಪರಿಶೀಲಿಸಿದರು. ಸ್ವತಃ ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ಡಿಸಿ, ಉತ್ತಮ ಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡರು.
ತಮ್ಮ ಕ್ಯಾಮರಾದಲ್ಲಿ ತೋಳದ ಮರಿಗಳ ಫೊಟೋ ಕ್ಲಿಕ್ಕಿಸಲು ಗುಹೆಯ ಬಳಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಜಿಲ್ಲಾಧಿಕಾರಿ ನಳಿನ್ ಕಾದು ನಿಂತಿದ್ದರು. ಆದರೆ ಜನರ ಚಲನವಲನದ ಸುಳಿವರಿತ ತೋಳಗಳು ಕಣ್ಣಿಗೆ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ನಿರಾಸೆಯಿಂದಲೇ ಡಿಸಿ ವಾಪಸ್ ಆದರು.
ಕನಕಗಿರಿಯ ತೋಳ ಧಾಮಕ್ಕೆ ಡಿಸಿ ಭೇಟಿ (ETV Bharat) ಕಟ್ಟುನಿಟ್ಟಿನ ಸೂಚನೆ :"ಸಂರಕ್ಷಿತ ತೋಳಧಾಮದಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯಬಾರದು, ಅಕ್ರಮ ನುಸುಳುಕೋರರನ್ನು ಕಟ್ಟುನಿಟ್ಟಾಗಿ ತಡೆಯಬೇಕು. ತೋಳ ಸೇರಿದಂತೆ ಈ ಕುರುಚಲು ಕಾಡಿನಲ್ಲಿ ಸಾಕಷ್ಟು ಕತ್ತೆ ಕಿರುಬ, ಪ್ರಾಣಿ, ಪಕ್ಷಿಗಳಿದ್ದು ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಅಲ್ಲದೆ ಈಗಾಗಲೇ ಆರಂಭವಾಗಿರುವ ಬೇಸಿಗೆಯಲ್ಲಿ ಈ ಅರಣ್ಯ ಹುಲ್ಲುಗಾವಲು ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರು, ಅಗತ್ಯ ಬಿದ್ದರೆ ಆಹಾರದ ವ್ಯವಸ್ಥೆ ಮಾಡಬೇಕು" ಎಂದು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಹುಲ್ಲುಗಾವಲು ವಿಸ್ತರಣೆ ಆದ್ಯತೆ : ಈಟಿವಿ ಭಾರತಜೊತೆ ಮಾತನಾಡಿದ ಜಿಲ್ಲಾಧಿಕಾರಿ, "ಇಲ್ಲಿನ ತೋಳಗಳಿಗೆ ಮತ್ತು ವನ್ಯ ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಗಮನದಲ್ಲಿರಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಸಲಹೆ ಪಡೆದು ಈ ಬಗ್ಗೆ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರ ಹಸಿರು ನಿಶಾನೆ ತೋರಿದಲ್ಲಿ ಸಾರ್ವಜನಿಕರಿಗೆ ತೋಳಧಾಮದ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು" ಎಂದು ತಿಳಿಸಿದರು.
"ದಟ್ಟವಾದ ಕಾಡು, ದೊಡ್ಡ ಮರ-ಗಿಡಗಳಿದ್ದರೆ ಮಾತ್ರ ಅರಣ್ಯ ಎಂದು ಭಾವಿಸಲಾಗುತ್ತಿದೆ. ಕುರುಚಲು ಗಿಡಗಳಿದ್ದರೂ ಅದನ್ನು ಅರಣ್ಯ ಪ್ರದೇಶ ಎಂದು ಕರೆಯಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ದಟ್ಟ ಮರ-ಗಿಡಗಳಿಗಿಂತ ಇಂತಹ ಕುರುಚಲು ಅಥವಾ ಹುಲ್ಲುಗಾವಲು ಪ್ರದೇಶ ಹೆಚ್ಚಿದೆ. ಜೈವಿಕ ಸಮತೋಲನಕ್ಕಾಗಿ ಜಿಲ್ಲೆಯಲ್ಲಿ ಮತ್ತಷ್ಟು ಹುಲುಗಾವಲು ಕಾಡು ನಿರ್ಮಾಣ ಮಾಡಲಾಗುವುದು. ಜಿಲ್ಲೆಯಲ್ಲಿರುವ ಕಂದಾಯ ಭೂಮಿಯನ್ನು ಸೂಕ್ತ ಪ್ರಮಾಣದಷ್ಟು ಅರಣ್ಯ ಇಲಾಖೆಗೆ ಒಪ್ಪಿಸುವ ಚಿಂತನೆ ಇದೆ. ಇದೇ ಕುರುಚಲು-ಹುಲ್ಲುಗಾವಲಿನಲ್ಲಿ ಹೆಚ್ಚಿನ ಪಕ್ಷಿಗಳು ಗೂಡು ಕಟ್ಟಿ ಮರಿಗಳನ್ನು ಮಾಡುತ್ತವೆ" ಎಂದರು.
ಬಳಿಕ ಜಿಲ್ಲಾಧಿಕಾರಿ, ಬಂಕಾಪುರ ಅರಣ್ಯಧಾಮದಿಂದ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲದ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕನಕಗಿರಿಯ ತಹಶೀಲ್ದಾರ್ ವಿಶ್ವನಾಥ ಮುರಡಿ, ಅರಣ್ಯ ಇಲಾಖೆಯ ಅಧಿಕಾರಿಗಳಿದ್ದರು.
ಇದನ್ನೂ ಓದಿ:ಮೈಸೂರು : ಬೇರ್ಪಟ್ಟ 3 ಚಿರತೆ ಮರಿಗಳನ್ನು ಮರಳಿ ತಾಯಿಯ ಮಡಿಲು ಸೇರಿಸಿದ ಅರಣ್ಯ ಇಲಾಖೆ