ಕಾಳಜಿ ಕೇಂದ್ರಕ್ಕೆ ಭೇಟಿ ಕೊಟ್ಟು ಸಂತ್ರಸ್ತರಿಗೆ ಧೈರ್ಯ ತುಂಬಿದ ಡಿಸಿ (ETV Bharat) ಬೆಳಗಾವಿ: ಘಟಪ್ರಭಾ ನದಿ ಅಬ್ಬರದಿಂದ ಗೋಕಾಕ್ ಪಟ್ಟಣ ಮತ್ತು ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಮನೆಗೆ ನೀರು ನುಗ್ಗಿ ಅತಂತ್ರವಾಗಿರುವ ಸಾವಿರಾರು ಸಂತ್ರಸ್ತರು ಗೋಕಾಕ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ವೇಳೆ ಸಂತ್ರಸ್ತರನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿಯಾಗಿ ಧೈರ್ಯ ತುಂಬಿದರು.
ಇದೇ ವೇಳೆ ಈಟಿವಿ ಭಾರತ್ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆರೇಳು ದಿನಗಳಿಂದ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಸತಾರಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ನಾವು ನಿರಂತರವಾಗಿ ಚರ್ಚೆ ಮಾಡುತ್ತಿದ್ದೇವೆ. ಮಹಾರಾಷ್ಟ್ರದಿಂದ ಎಷ್ಟು ನೀರು ಬರುತ್ತಿದೆ. ಅದೇ ರೀತಿ ಬಾಗಲಕೋಟೆ, ವಿಜಯಪುರ, ರಾಯಚೂರಿನ ನಾರಾಯಣಪುರಕ್ಕೆ ನಾವು ಎಷ್ಟು ನೀರು ಬಿಡಬೇಕೆಂಬ ಕುರಿತು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಅಲ್ಲದೇ ಆಲಮಟ್ಟಿ ಜಲಾಶಯ ಕಳೆದ ವಾರ ಶೇ.80ರಷ್ಟು ಭರ್ತಿಯಾಗಿತ್ತು. ಹಾಗಾಗಿ ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಆಲಮಟ್ಟಿ ಜಲಾಶಯದಲ್ಲಿ ನೀರು ಕಡಿಮೆ ಮಾಡಿ ಶೇ.58ರಷ್ಟು ಸಂಗ್ರಹಿಸಿ ಇಟ್ಟಿದ್ದಾರೆ. ಇದರಿಂದ ಮಹಾರಾಷ್ಟ್ರ ಮತ್ತು ಘಟಪ್ರಭಾದಿಂದ ಎಷ್ಟೇ ನೀರು ಬಂದರೂ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದಾರೆ ಎಂದರು.
ನದಿಗೆ ಹೆಚ್ಚು ನೀರು ಬಂದಾಗ ಹಲವು ಗ್ರಾಮಗಳ ಮನೆಗಳು ಮತ್ತು ಜಮೀನುಗಳಿಗೆ ನೀರು ನುಗ್ಗಿದೆ. ಅದಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮಾಡಿಕೊಂಡಿದ್ದು, ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆದಿದ್ದೇವೆ. ನಿನ್ನೆ ಮಧ್ಯಾಹ್ನದಿಂದ ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿದ್ದಾರೆ ಎಂದು ತಿಳಿಸಿದರು.
ಸದ್ಯ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಪ್ರತಿನಿತ್ಯ 2.5 ಲಕ್ಷ ಕ್ಯೂಸೆಕ್ ನೀರು ರಾಜ್ಯಕ್ಕೆ ಬರುತ್ತಿದೆ. ಇನ್ನು ಹಿಡಕಲ್ ಜಲಾಶಯದ 50 ಸಾವಿರ ಕ್ಯೂಸೆಕ್, ಲೋಳಸೂರ್ ಸೇತುವೆ 30 ಸಾವಿರ ಕ್ಯೂಸೆಕ್, ಎಲ್ಲಾ ಸೇರಿ ಸುಮಾರು 3 ಲಕ್ಷ ಕ್ಯೂಸೆಕ್ ನೀರು ಆಲಮಟ್ಟಿಗೆ ಹೋಗುತ್ತಿದೆ. ಇನ್ನು ನಿನ್ನೆ ಸಂಜೆ ಆಲಮಟ್ಟಿ ಜಲಾಶಯದಿಂದ 3.20 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟಿದ್ದಾರೆ. ಹಾಗಾಗಿ, ಆಲಮಟ್ಟಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದರು.
ಗೋಕಾಕಿನಲ್ಲಿ 17 ಕಾಳಜಿ ಕೇಂದ್ರ ಸ್ಥಾಪಿಸಿದ್ದೇವೆ. ಇಲ್ಲಿ ಸುಮಾರು 1 ಸಾವಿರ ಜನರು ಸದ್ಯ ಆಶ್ರಯ ಪಡೆದಿದ್ದಾರೆ. ನಮ್ಮಲ್ಲಿ ಕಾಳಜಿ ಕೇಂದ್ರಗಳು ಮತ್ತು ಹಣಕಾಸಿನ ಯಾವುದೇ ರೀತಿ ಕೊರತೆ ಇಲ್ಲ. ಸಂತ್ರಸ್ತರಿಗೆ ಊಟ, ವಸತಿ ಸೇರಿ ಎಲ್ಲ ರೀತಿ ವ್ಯವಸ್ಥೆ ಮಾಡಿದ್ದೇವೆ. ಹಾಗಾಗಿ, ಜನರು ತಮ್ಮ ಮನೆ ಬಾಗಿಲಿಗೆ ನೀರು ಬರುವರೆಗೂ ದಯವಿಟ್ಟು ಕಾಯಬೇಡಿ. ನಮ್ಮ ಸ್ಥಳೀಯ ಅಧಿಕಾರಿಗಳು ನಿಮಗೆ ಎಚ್ಚರಿಕೆ ಕೊಟ್ಟಾಗ ತಡಮಾಡದೇ ಕಾಳಜಿ ಕೇಂದ್ರಕ್ಕೆ ಬಂದು ಸೇರುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿಕೊಂಡರು.
ಇದನ್ನೂ ಓದಿ:ಘಟಪ್ರಭಾ ಪ್ರವಾಹಕ್ಕೆ ನಲುಗಿದ ಗೋಕಾಕ್: ಹಲವು ಬಡಾವಣೆಗಳು ಜಲಾವೃತ, ಸಾವಿರಾರು ಜನರ ಬದುಕು ಅತಂತ್ರ - flood in Gokak