ಅಡಿಕೆ, ಬಾಳೆ ತೋಟಕ್ಕೆ ಬೆಂಕಿ ದಾವಣಗೆರೆ:ಯಾರೋ ಕಿಡಿಗೇಡಿಗಳು ಕಟಾವಿಗೆ ಬಂದಿದ್ದ ಬಾಳೆ, ಅಡಕೆ ತೋಟಕ್ಕೆ ಬೆಂಕಿ ಇಟ್ಟು ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಹುಲಿಕಟ್ಟೆ ಗ್ರಾಮದಲ್ಲಿ ನಿನ್ನೆ ನಡೆದಿದೆ. ಬಾಳೆ, ಅಡಿಕೆ ತೋಟಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಅನುಭವಿಸಿರುವ ರೈತ ವಿಶ್ವನಾಥಪ್ಪ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ಬಳಿಕ ತನಿಖೆ ಕೈಗೊಂಡಿದ್ದಾರೆ.
ಕಿಡಿಗೇಡಿಗಳ ದುಷ್ಕೃತ್ಯದಿಂದ ಬಾಳೆ ಫಸಲು ರೈತನ ಕೈಸೇರುವ ಮುನ್ನವೇ ಬೆಂಕಿಗಾಹುತಿ ಆಗಿದೆ. ಹತ್ತು ಲಕ್ಷ ರೂ.ಗಿಂತ ಹೆಚ್ಚು ಬೆಳೆ ನಷ್ಟವಾಗಿದ್ದು, ಬೆಳೆ ಹಾನಿ ಪರಿಹಾರಕ್ಕಾಗಿ ರೈತ ವಿಶ್ವನಾಥಪ್ಪ ಸರ್ಕಾರಕ್ಕೆ ಮೊರೆಯಿಟ್ಟಿದ್ದಾರೆ.
ಎರಡೂವರೆ ಎಕರೆ ಅಡಿಕೆ ಬಾಳೆ ಬೆಂಕಿಗಾಹುತಿ: ಹುಲಿಕಟ್ಟೆ ಗ್ರಾಮದ ವಿಶ್ವನಾಥಪ್ಪ ತಮ್ಮ ಎರಡೂವರೆ ಎಕರೆಯಲ್ಲಿ ಮೂರು ಸಾವಿರದಷ್ಟು ಬಾಳೆ, ಅಡಿಕೆ ಗಿಡ ನೆಟ್ಟು ಬೆಳೆಸಿದ್ದರು. ಬಾಳೆ ಫಸಲು ಕಟಾವಿಗೆ ಬಂದಿತ್ತು. ಆದರೆ ಯಾರೋ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ 1300 ಅಡಿಕೆ 1300 ಬಾಳೆ ಗಿಡಗಳು ಸುಟ್ಟು ಕರಕಲಾಗಿವೆ.
ರೈತ ಸಾಲಸೋಲ ಮಾಡಿ ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದ 10 ಲಕ್ಷ ರೂಪಾಯಿ ನಷ್ಟ ಆಗಿದೆ. ಹಿಂದಿನ ಬಾರಿ 7 ಲಕ್ಷ ರೂಪಾಯಿಗಳಷ್ಟು ಬಾಳೆ ಬಂದಿತ್ತೆಂದು ರೈತ ಮಾಧ್ಯಮದವರ ಎದುರು ಅಳಲು ತೋಡಿಕೊಂಡಿದ್ದಾನೆ.
ಪ್ರತ್ಯಕ್ಷದರ್ಶಿ ಶಿವರಾಜ್ ಮಾತನಾಡಿ, ಬಾಳೆ ತೋಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರೆಂದು ತಿಳಿದ ತಕ್ಷಣ ಇಲ್ಲಿ ಬಂದು ನೋಡಿದ್ರೆ ತೋಟ ಹೊತ್ತು ಉರಿಯುತ್ತಿತ್ತು. ಕೂಡಲೇ ಟ್ಯಾಂಕರ್ ಮೂಲಕ ನೀರು ತಂದು ಬೆಂಕಿ ನಂದಿಸಿಲು ಪ್ರಯತ್ನಿಸಿದೆವು. ಆದರೂ ಅಡಿಕೆ, ಬಾಳೆ ಬೆಳೆ ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಅದರಲ್ಲಿಯೂ 150 ಗಿಡಗಳು ಬೆಂಕಿಯಿಂದ ಸಂರಕ್ಷಣೆ ಮಾಡಿದೆವು. ಬೆಂಕಿಗೆ ಸಾವಿರಾರು ಗಿಡಗಳು ಸುಟ್ಟು ಹೋಗಿವೆ. ಆಗ್ನಿ ಶಾಮಕ ದಳ ಕರೆಸುವಷ್ಟು ಸಮಯ ಇದ್ದಿಲ್ಲ. ಕಟಾವಿಗೆ ಬಂದ ಬಾಳೆ ಸಂಪೂರ್ಣ ಸುಟ್ಟುಹೋಗಿದೆ ಎಂದು ತಿಳಿಸಿದ್ದಾರೆ.
ರೈತನಿಗೆ ಬೇಸರ:ರೈತ ವಿಶ್ವನಾಥಪ್ಪ ಅವರ ಪುತ್ರ ಉಮಾಶಂಕರ್ ಮಾತನಾಡಿ, ಎರಡೂವರೆ ಎಕರೆಯಲ್ಲಿ ಅಡಿಕೆ ಹಾಗು ಬಾಳೆ ಹಾಕಿದ್ವಿ, ಯಾರೋ ಬೆಂಕಿ ಹಾಕಿದ್ದರಿಂದ ಇಡೀ ತೋಟ ಸುಟ್ಟು ಕರಕಲಾಗಿದೆ. ಬಾಳೆ ಫಸಲು ಕಟಾವಿಗೆ ಬಂದಿತ್ತು. ಹಿಂದಿನ ವರ್ಷ 7 ಲಕ್ಷ ರೂಪಾಯಿ ಆದಾಯ ಬಾಳೆ ಬೆಳೆಯಿಂದ ಬಂದಿತ್ತು. ಈ ದುಷ್ಕೃತ್ಯ ಯಾರು ಮಾಡಿದ್ದಾರೆ ಅನ್ನುವುದು ಗೊತ್ತಾಗ್ತಿಲ್ಲ. ಯಾರೋ ಬೇಕಂತ ಮಾಡಿದ್ದಾರೆ. ಹಿಂದಿನ ದಿನ ಮನೆಯವರೆಲ್ಲರೂ ಸೇರಿ ಕಾರ್ಯಕ್ರಮಕ್ಕೆ ದಾವಣಗೆರೆಗೆ ತೆರಳಿದ್ದೆವು. ಇದನ್ನೂ ತಿಳಿದು ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ್ದಾರೆ. ಮೂರು ವರ್ಷಗಳಿಂದ ಅಡಿಕೆ ಗಿಡಗಳನ್ನು ಕಷ್ಟಪಟ್ಟು ಬೆಳೆಸಿದ್ದೆವು, ಈಗ ಸುಟ್ಟುಹೋಗಿವೆ. ಒಂದೂವರೆ ಸಾವಿರ ಬಾಳೆ ಗಿಡ, ಒಂದೂವರೆ ಸಾವಿರ ಅಡಿಕೆ ಗಿಡಗಳಿದ್ದು, ತಲಾ 1300 ಅಡಿಕೆ, ಬಾಳೆ ಗಿಡಗಳು ಬೆಂಕಿಗಾಹುತಿಯಾಗಿವೆ. ಈ ಹಾನಿಗೆ ಸರ್ಕಾರ ಸ್ಪಂದಿಸಿ ಪರಿಹಾರ ನೀಡಬೇಕೆಂದು ರೈತ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಮಹಡಿಯಲ್ಲಿ ಮಲಗಿದ್ದ ಮೂವರು ಸಹೋದರಿಯರು ಬೆಂಕಿಗಾಹುತಿ