ದಾವಣಗೆರೆ: ನಗರದಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದೆ. ಹಂದಿಗಳ ಹಾವಳಿಗೆ ಕಡಿವಾಣ ಹಾಕಲು ದಾವಣಗೆರೆ ಮಹಾನಗರ ಪಾಲಿಕೆ ವರಹ ಶಾಲೆ ನಿರ್ಮಾಣ ಮಾಡಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಆದ್ರೆ ಈ ಕೇಂದ್ರ ಆರಂಭಕ್ಕೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತಿದೆ. ಹಂದಿ ಶೆಡ್ ಆರಂಭ ಮಾಡಲು ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ದಾವಣಗೆರೆ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ ಹಂದಿಗಳನ್ನು ಸ್ಥಳಾಂತರ ಮಾಡಲು ಮಹಾನಗರ ಪಾಲಿಕೆ ಪ್ಲ್ಯಾನ್ ಮಾಡಿದೆ. ಗುಡಾಳ್ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ವರಹ ಶಾಲೆಯನ್ನು ಪಾಲಿಕೆಯಿಂದ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಾವಣಗೆರೆ ನಗರದಲ್ಲಿನ ಹಂದಿಗಳ ಉಪಟಳಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಇಲ್ಲಿನ ಹಂದಿಗಳನ್ನು ಸ್ಥಳಾಂತರ ಮಾಡಲು ಪಾಲಿಕೆ ತೆರೆಮರೆಯಲ್ಲಿ ಸಿದ್ಧತೆ ನಡೆಸಿತ್ತು. ಅದ್ರೆ ಹಂದಿ ಸ್ಥಳಾಂತರ ಮಾಡದಂತೆ ಹಂದಿ ಸಾಕಾಣಿಕೆದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಕೂಡ ಹಂದಿಗಳನ್ನು ಸ್ಥಳಾಂತರ ಮಾಡದಂತೆ ಸ್ಟೇ ನೀಡಿದ್ದು, ಪಾಲಿಕೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಾಲಿಕೆ ಈ ವರಾಹ ಶಾಲೆ ನಿರ್ಮಾಣ ಮಾಡಿಯೇ ಬಿಟ್ಟಿದೆ. ಹಂದಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವರಾಹ ಶಾಲೆಯ ಯೋಜನೆಯನ್ನು ಅಂದಿನ ಮೇಯರ್ ಎಸ್.ಟಿ ವೀರೇಶ್ ಅವರು ಕೈಗೆತ್ತಿಕೊಂಡಿದ್ದರು. ದಾವಣಗೆರೆ ತಾಲೂಕಿನ ಹೆಬ್ಬಾಳ ಬಳಿಯ ಹೊಸಹಳ್ಳಿ ಹೊರವಲಯದಲ್ಲಿ 7 ಎಕರೆ ಜಾಗದಲ್ಲಿ ವರಾಹ ಶಾಲೆ ನಿರ್ಮಿಸಲಾಗಿದೆ. ಆದ್ರಿನ್ನೂ ಹಂದಿಗಳನ್ನು ಸ್ಥಳಾಂತರ ಮಾಡಲಾಗಿಲ್ಲ. ಅಲ್ಲದೇ ಈ ವರಾಹ ಕೇಂದ್ರ ಆರಂಭ ಮಾಡಲು ಹೊಸಹಳ್ಳಿ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇಲ್ಲಿ ಕೇಂದ್ರ ತೆರೆದರೆ ರೋಗರುಜಿನೆಗಳು ಶುರುವಾಗಲಿವೆ ಎಂಬುದು ಏಳು ಹಳ್ಳಿಯ ಬಹುತೇಕ ಜನರ ವಾದವಾಗಿದೆ.
ಹೇಗಿರಲಿದೆ ನೂತನ ವರಾಹ ಶಾಲೆ?ಇಡೀ ರಾಜ್ಯದಲ್ಲೇ ಎಲ್ಲೂ ಇಲ್ಲದ ವರಾಹ ಶಾಲೆಯನ್ನು ದಾವಣಗೆರೆಯಲ್ಲಿ ತೆರೆಯಲಾಗಿದೆ. ಒಟ್ಟು 7 ಎಕರೆ ಜಾಗದಲ್ಲಿ 13 ಅಡಿ ಎತ್ತರದ ಕಾಂಪೌಂಡ್ ಹಾಕಿ ಅಲ್ಲಿ ಹಂದಿಗಳನ್ನು ಬಿಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ಹಂದಿ ಮಾಲೀಕರು ಅಲ್ಲಿಗೆ ತೆರಳಲು ರಸ್ತೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಲೆಕ್ಕಾಚಾರ ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಹಂದಿಗಳಿಗೆ ಆಹಾರ ವ್ಯವಸ್ಥೆಗಾಗಿ ಪಾಲಿಕೆಯಿಂದ, ಮನೆಗಳಿಂದ, ಹೋಟೆಲ್ಗಳಿಂದ ಸಿಗುವ ಹಸಿ ತ್ಯಾಜ್ಯವನ್ನು ಹಂದಿಗಳಿಗೆ ಹಾಕಲಾಗುವುದು. ಜೊತೆಗೆ ಹಂದಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಅಲ್ಲೇ ಉಳಿದುಕೊಳ್ಳುವವರಿಗೆ ಶೆಡ್ ಮಾದರಿಯ ವಸತಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.