ಕರ್ನಾಟಕ

karnataka

ETV Bharat / state

Watch..: ಅರ್ಜುನನಿದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ: ಮಾಜಿ ಕ್ಯಾಪ್ಟನ್ ಸ್ಥಾನ ತುಂಬಲು ರೆಡಿ - MAHENDRA ELEPHANT IN BALLE CAMP

ದಸರಾದಲ್ಲಿ ಭಾಗಿಯಾದ ಮಹೇಂದ್ರ ಆನೆ ಬಳ್ಳೆ ಶಿಬಿರ ಸೇರಿದ್ದು, ಜನತೆಗೆ ಸಂತಸ ತಂದಿದೆ. ಮಹೇಂದ್ರನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಜನರು ಬಳ್ಳೆ ಆನೆ ಶಿಬಿರಕ್ಕೆ ಸ್ವಾಗತ ಕೊರಿದ್ದಾರೆ.

Dasara Elephant Mahendra
ಮಹೇಂದ್ರ ಹಾಗೂ ಲಕ್ಷ್ಮೀ ಆನೆಗೆ ಪೂಜೆ (ETV Bharat)

By ETV Bharat Karnataka Team

Published : Oct 17, 2024, 10:14 AM IST

ಮೈಸೂರು:ದಸರಾ ಗಜಪಡೆ ಮಾಜಿ ಕ್ಯಾಪ್ಟನ್ ಅರ್ಜುನ ಸಾವಿನ ಬಳಿಕ ಸಾಕಾನೆಗಳಿಲ್ಲದೇ ಭಣಗುಡುತ್ತಿದ್ದ ಹೆಚ್.ಡಿ.ಕೋಟೆ ತಾಲೂಕಿನ ಬಳ್ಳೆ ಶಿಬಿರಕ್ಕೆ ಭವಿಷ್ಯದ ಕ್ಯಾಪ್ಟನ್​ ಆಗಮನದಿಂದ ಜೀವ ಕಳೆ ಬಂದಿದೆ. ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿರುವ 41 ವರ್ಷದ ಮಹೇಂದ್ರ ಆನೆಯನ್ನು ದಸರಾ ಬಳಿಕ ಮತ್ತಿಗೋಡು ಆನೆ ಶಿಬಿರದಿಂದ ಬಳ್ಳೆಗೆ ಸ್ಥಳಾಂತರ ಮಾಡಲಾಗಿದೆ.

ಬಳ್ಳೆ ಆನೆ ಶಿಬಿರದಲ್ಲಿದ್ದ ಅರ್ಜುನ ಕಳೆದ ವರ್ಷ ಡಿ.4ರಂದು ಸಕಲೇಶಪುರ ಸಮೀಪ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದುರಂತ ಅಂತ್ಯ ಕಂಡಿತ್ತು. ಅಲ್ಲದೇ, ಬಳಿಕ ಕುಮಾರಸ್ವಾಮಿ, ದುರ್ಗಪರಮೇಶ್ವರಿ ಆನೆಗಳೂ ಸಾವನ್ನಪ್ಪಿದ ನಂತರ ಆನೆಗಳಿಲ್ಲದೇ ಬಳ್ಳೆ ಶಿಬಿರ ಖಾಲಿಯಾಗಿತ್ತು. ಇದೀಗ ಅರ್ಜುನನ ಸ್ಥಳಕ್ಕೆ ಮಹೇಂದ್ರ ಆನೆಯನ್ನು ಸ್ಥಳಾಂತರಿಸಲಾಗಿದೆ. ಮಹೇಂದ್ರನ ಜೊತೆ ರಾಮಪುರ ಲಕ್ಷ್ಮೀ ಆನೆಯನ್ನೂ ಕರೆ ತಂದಿರುವುದು ಈ ಶಿಬಿರಕ್ಕೆ ಮರುಜೀವ ಬಂದಂತಾಗಿದೆ. ಕ್ಯಾಂಪ್​ಗೆ ಬಂದ ಆನೆಗಳಿಗೆ ಬಳ್ಳೆಯ ಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸ್ವಾಗತಿಸಿಕೊಳ್ಳಲಾಗಿದೆ.

ಬಳ್ಳೆ ಶಿಬಿರಕ್ಕೆ ಮಹೇಂದ್ರ ಲಕ್ಷ್ಮೀ ಆನೆ ಆಗಮನ (ETV Bharat)

2018ರಲ್ಲಿ ರಾಮನಗರದ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾದ 41 ವರ್ಷದ ಮಹೇಂದ್ರ ಕಳೆದ 2 ವರ್ಷಗಳಿಂದ ಶ್ರೀರಂಗಪಟ್ಟಣದ ಗ್ರಾಮೀಣ ದಸರಾದಲ್ಲಿ ಅಂಬಾರಿ ಆನೆಯಾಗಿ ಭಾಗವಹಿಸುತ್ತಿತ್ತು. ಇದನ್ನು ಈ ಬಾರಿ ಮೈಸೂರು ದಸರಾಗೆ ಕರೆತರಲಾಗಿತ್ತು. 2002ರಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಲಕ್ಷ್ಮೀ ಆನೆಯು ಇಲಾಖೆಯ ಶಿಬಿರದಲ್ಲಿ ಸಾಕಲಾಗಿದ್ದ ಆನೆಯಾಗಿದೆ. ಇವರೆಡೂ ಈಗ ಬಳ್ಳೆ ಆನೆ ಶಿಬಿರ ಸೇರಿವೆ.

ಅಂಬಾರಿ ಹೊರುವ ಭರವಸೆ ಮೂಡಿಸಿದ ಮಹೇಂದ್ರ: ಸದ್ಯ ಮಹೇಂದ್ರ ಭವಿಷ್ಯದ ಅಂಬಾರಿ ಆನೆಯಾಗುವ ಭರವಸೆ ಮೂಡಿಸಿದ್ದಾನೆ. ಈಗಾಗಲೇ ಆನೆಪ್ರಿಯರು ಮುಂದಿನ ಅಂಬಾರಿ ಆನೆ ಮಹೇಂದ್ರ ಎಂದೇ ಹೇಳುತ್ತಿದ್ದಾರೆ. ಮಹೇಂದ್ರನನ್ನು ಬಲಿಷ್ಠವಾಗಿ ತಯಾರುಗೊಳಿಸುವ ಜವಾಬ್ದಾರಿ ಮಾವುತ ರಾಜಣ್ಣ ಮತ್ತು ಕಾವಾಡಿ ಮಲ್ಲಿಕಾರ್ಜುನ ಹಾಗೂ ಜಮೇದಾರನಾಗಿ ನೇಮಕಗೊಂಡಿರುವ ಅರ್ಜುನ ಆನೆಯ ಮಾವುತನಾಗಿದ್ದ ವಿನುವಿನ ಹೆಗಲ ಮೇಲಿದೆ.

ಬಳ್ಳೆಯಲ್ಲಿದ್ದ ದಸರಾ ಆನೆಗಳು: ಈ ಹಿಂದೆ ಬಳ್ಳೆ ಆನೆ ಶಿಬಿರದ ರಾಜೇಂದ್ರ 3 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಆನೆ. ವಯೋ ಸಹಜವಾಗಿ ದಸರಾದಿಂದ ರಾಜೇಂದ್ರನಿಗೆ ನಿವೃತ್ತಿ ನೀಡಲಾಗಿತ್ತು. ಕೊನೆಗೆ ಇಳಿ ವಯಸ್ಸಿನಲ್ಲಿ ರಾಜೇಂದ್ರ ಸಾವನ್ನಪ್ಪಿತ್ತು.

ಮಹೇಂದ್ರ ಹಾಗೂ ಲಕ್ಷ್ಮೀ ಆನೆ (ETV Bharat)

ಬಳಿಕ 1971ರಲ್ಲಿ ಕಾಕನಕೋಟೆ ಖೆಡ್ಡದಲ್ಲಿ ಸೆರೆಯಾದ ದ್ರೋಣ ಆನೆಯನ್ನು ಮಾವುತ ದೊಡ್ಡಪ್ಪಾಜಿ ಪಳಗಿಸಿದರು. 1981ರಲ್ಲಿ ಅಂಬಾರಿ ಹೊರುವ ಕಾಯಕ ಆರಂಭಿಸಿದ ದ್ರೋಣ 1997ರ ನಡುವೆ 18 ಬಾರಿ ಅಂಬಾರಿ ಹೊತ್ತು ದಾಖಲೆ ಬರೆದಿತ್ತು. 1998ರಲ್ಲಿ ವಿಪರ್ಯಾಸವೆಂಬಂತೆ ಮೇಯುವಾಗ ವಿದ್ಯುತ್ ತಗುಲಿ ಮೃತಪಟ್ಟಿತ್ತು.

ಬಲರಾಮನ ಬಳಿಕ ಅಂಬಾರಿ ಹೊತ್ತ ಆನೆ ಅರ್ಜುನ:ಬಳ್ಳೆ ಆನೆ ಶಿಬಿರದ ಅರ್ಜುನ ಆನೆಯು 9 ಬಾರಿ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಿದ್ದ. ಅತ್ಯಾಕರ್ಷಕ ಮೈಕಟ್ಟಿನಿಂದಲೇ ಹಾಗೂ ಲಕ್ಷಣವಾದ ಮುಖದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ಆನೆ ಇದಾಗಿತ್ತು. 1968ರಲ್ಲಿ ಕಾಕನಕೋಟೆಯ ಖೆಡ್ಡದಲ್ಲಿ ಸೆರೆಹಿಡಿಯಲಾದ ಅರ್ಜುನ ಆನೆಯನ್ನು ಬಳ್ಳೆ ಆನೆ ಶಿಬಿರದಲ್ಲಿ ಪಳಗಿಸಲಾಯಿತು. ವಿಪರ್ಯಾಸವೆಂಬಂತೆ, ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ವೇಳೆ 2023ರ ಡಿಸೆಂಬರ್ ಮೊದಲ ವಾರದಂದು ಅರ್ಜುನ ಸಾವನ್ನಪ್ಪಿದ.

ಈ ಸಂಬಂಧ ನಾಗರಹೊಳೆ ರಾಷ್ಟ್ರೀಯ ನಿರ್ದೇಶಕಿ ಪಿ.ಎ.ಸೀಮಾ ಮಾತನಾಡಿ, ''ಸರ್ಕಾರದ ಆದೇಶದಂತೆ ಸ್ಥಳಾಂತರಿಸಲಾಗಿದೆ. ಬಳ್ಳೆ ಶಿಬಿರದಲ್ಲಿ ಯಾವುದೇ ಆನೆಗಳಿಲ್ಲದಿರುವುದರಿಂದ ಹುಲಿ, ಆನೆ ಕಾರ್ಯಾಚರಣೆಗಳಿದ್ದಾಗ ಇಲ್ಲಿಂದ ಆನೆಗಳನ್ನು ಕರೆತರುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಮಹೇಂದ್ರ ಮತ್ತು ಲಕ್ಷ್ಮೀ ಆನೆಯನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ‌'' ಎಂದಿದ್ದಾರೆ.

ಇದನ್ನೂ ಓದಿ:ಚಾರಣ ಪ್ರಿಯರಿಗೆ ಗುಡ್​ ನ್ಯೂಸ್​: ನಾಗಮಲೆಗೆ ತೆರಳಲು ಅವಕಾಶ, ಬುಕಿಂಗ್ ಆರಂಭ

ABOUT THE AUTHOR

...view details