ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಕೃತ್ಯದ ವೇಳೆ ಘಟನಾ ಸ್ಥಳದಲ್ಲಿದ್ದ ಕಿರಣ್ ಹಾಗೂ ಪ್ರವೀಣ್ ಎಂಬವರ ಹೇಳಿಕೆಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಂಡಿದ್ದಾರೆ.
ಹತ್ಯೆ ನಡೆದ ಪಟ್ಟಣಗೆರೆಯ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್, ಪ್ರವೀಣ್ ಕರೆಸಿ ಜೂನ್ 22ರಂದು ಹೇಳಿಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಹತ್ಯೆಯಾದ ದಿನ ಶೆಡ್ಗೆ ಯಾರ್ಯಾರು ಬಂದಿದ್ದರು?, ಶೆಡ್ನಲ್ಲಿ ಏನಾಯ್ತು? ಎಂಬ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ಮತ್ತೊಂದೆಡೆ, ಚಿತ್ರದುರ್ಗಕ್ಕೆ ತೆರಳಿರುವ ತನಿಖಾ ತಂಡ, ರೇಣುಕಾಸ್ವಾಮಿ ಕುಟುಂಬಸ್ಥರು ಹಾಗೂ ಪರಿಚಿತರ ಹೇಳಿಕೆ ಪಡೆದಿದ್ದಾರೆ. ಪೋಷಕರಾದ ಕಾಶಿನಾಥ ಶಿವನಗೌಡರ ಹಾಗೂ ರತ್ನಪ್ರಭಾ, ಪತ್ನಿ ಸಹನಾ, ಸಹೋದರಿ ಸುಚೇತಾರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಫಾರ್ಮಸಿ ಸಿಬ್ಬಂದಿಯ ಹೇಳಿಕೆಯನ್ನೂ ಪಡೆಯಲಾಗಿದೆ.