ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಸೇರಿದಂತೆ ಮತ್ತಿತರರ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರಕ್ಕೆ(ಡಿ.3) ಮುಂದೂಡಿದೆ.
ದರ್ಶನ್ ಸೇರಿದಂತೆ ಮತ್ತಿತರರ ಆರೋಪಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ 11ನೇ ಆರೋಪಿಯಾಗಿರುವ ಆರ್.ನಾಗರಾಜ್ (ದರ್ಶನ್ ವ್ಯವಸ್ಥಾಪಕ) ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ''ಅರ್ಜಿದಾರರ ಕುರಿತಂತೆ ಪೊಲೀಸರ ಚೆಕ್ ಲಿಸ್ಟ್ ಸಂಶಯಕ್ಕೆ ಕಾರಣವಾಗುತ್ತದೆ. ಅವರ ಬಂಧನಕ್ಕೆ ಕಾರಣ ನೀಡಿಲ್ಲ. ಅರ್ಜಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿಯೂ ಈ ಬಗ್ಗೆ ವಿವರಣೆ ನೀಡಿಲ್ಲ'' ಎಂದು ವಿವರಿಸಿದರು.
ಘಟನೆ ಸಂಬಂಧ ಕೊಲೆ ಎನ್ನುವುದಕ್ಕೆ ಪುರಾವೆಗಳಿಲ್ಲ, ಕೊಲೆ ಮಾಡುವ ಉದ್ದೇಶ ಯಾರಿಗೂ ಇರಲಿಲ್ಲ. ಯಾರ ಬಳಿಯೂ ಆಯುಧಗಳಿರಲಿಲ್ಲ. ಶೆಡ್ನಲ್ಲಿ ಕೊಲೆಯಾಗಿದೆ ಎಂಬುದು ಸಾಭೀತುಪಡಿಸಲಾಗಿಲ್ಲ. ಕೊಲೆ ನಡೆದ ಸ್ಥಳದಲ್ಲಿ ರಕ್ತದ ಮಾದರಿಗಳು, ರಕ್ತದ ಆಯುಧಗಳು ಲಭ್ಯವಾಗಿಲ್ಲ. ಎಫ್ಎಸ್ಎಲ್ ವರದಿಯಲ್ಲಿ ಮಾತ್ರ ಇದು ಗೊತ್ತಾಗಿದೆ.
ಅರ್ಜಿದಾರರು ಕೇವಲ ಒಂದು ಬಾರಿ ಕೆನ್ನೆಗೆ ಬಾರಿಸಿದ್ದರು ಎಂಬುದಾಗಿ ಮಾತ್ರ ಈವರೆಗೀನ ಸಾಕ್ಷ್ಯಾಧಾರಗಳ ಮೂಲಕ ತಿಳಿದು ಬಂದಿದೆ. ಅರ್ಜಿದಾರರನ್ನು ಯಾವ ಕಾರಣಕ್ಕೆ ಬಂಧಿಸಲಾಗಿದೆ ಎಂಬ ಅಂಶವನ್ನು ವಿವರಿಸಿಲ್ಲ. ಪ್ರಕರಣ ಸಂಬಂಧ ದೂರು ನೀಡಿರುವುದಕ್ಕೆ ವಿಳಂಬವಾಗಿದೆ. ಪಂಚನಾಮೆ, ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ವಿಳಂಬವಾಗಿದೆ. ಛಾಯಾಚಿತ್ರಗಳ ಆಧಾರದಲ್ಲಿ ಸಾವಿನ ಸಮಯವನ್ನು ನೀಡಲಾಗುತ್ತಿದೆ. ಅಲ್ಲದೆ, ಅರ್ಜಿದಾರರ ವಿರುದ್ಧ ಪಿತೂರಿ ನಡೆಸಿರುವ ಸಂಬಂಧ ಸಾಕ್ಷ್ಯಾಧಾರಗಳಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ:ಪೆನ್ಡ್ರೈವ್ ಹಂಚಿಕೆ ಆರೋಪ: ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಪ್ರೀತಂ ಗೌಡ