ಮಂಗಳೂರು:ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯುವ ಉಪಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ. ಈ ಉಪಚುನಾವಣೆಯಲ್ಲಿ ಶೇ.100ರಷ್ಟು ಮತದಾನವಾದರೆ, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಲು ಕೇವಲ 3,017 ಮತಗಳನ್ನು ಪಡೆದರೆ ಸಾಕು.
ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯುವ ಉಪಚುನಾವಣೆಯಲ್ಲಿ ಒಟ್ಟು 6,032 ಮಂದಿ ಮತದಾರರಿದ್ದಾರೆ. ಇದರ ಪ್ರಕಾರ, ಒಂದು ವೇಳೆ ಶೇ.100ರಷ್ಟು ಮತದಾನ ನಡೆದರೂ ಅಭ್ಯರ್ಥಿ ಗೆಲ್ಲಲು 3,017 ಮತಗಳ ಅಗತ್ಯವಿದೆ.
ಕಣದಲ್ಲಿ ನಾಲ್ವರು ಅಭ್ಯರ್ಥಿಗಳು: ವಿಧಾನಪರಿಷತ್ ಸದಸ್ಯರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಇದೀಗ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ. ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಕಿಶೋರ್ ಬಿ.ಆರ್., ಕಾಂಗ್ರೆಸ್ನಿಂದ ರಾಜು ಪೂಜಾರಿ, ಎಸ್ಡಿಪಿಐನಿಂದ ಅನ್ವರ್ ಸಾದತ್ ಎಸ್. ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಕಣದಲ್ಲಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿ ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6,032 ಮಂದಿ ಮತದಾರರಿದ್ದಾರೆ. ಉಭಯ ಜಿಲ್ಲೆಗಳ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಶಾಸಕರು ಹಾಗೂ ಸಂಸದರು ಮತದಾನ ಮಾಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್‍ಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರಸಭೆಗಳಲ್ಲಿ 64, 3 ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯಿತಿಗಳಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯಿತಿಗಳಲ್ಲಿ 2,355 ಸದಸ್ಯರು, ಉಡುಪಿ ನಗರಸಭೆಯಲ್ಲಿ 36, 3, ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯಿತಿಯಲ್ಲಿ 17 ಮಂದಿ ಮತದಾನದ ಹಕ್ಕನ್ನು ಹೊಂದಿದ್ದಾರೆ.