ಮಂಗಳೂರು (ದಕ್ಷಿಣ ಕನ್ನಡ): ನಗರದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್ಟಿಎಸ್ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿ, 1,20,000 ರೂ. ದಂಡ ವಿಧಿಸಿ ಆದೇಶಿಸಿದೆ.
ಮಧ್ಯಪ್ರದೇಶ ಮೂಲದ ಜಯಸಿಂಗ್ (21), ಮುಖೇಶ್ ಸಿಂಗ್ (20), ಜಾರ್ಖಂಡ್ ಮೂಲದ ಮನೀಷ್ ತಿರ್ಕಿ(33) ಮರಣದಂಡನೆಗೆ ಒಳಗಾದ ಆರೋಪಿಗಳು. ಇವರು ಮಂಗಳೂರಿನ ಹೊರವಲಯದ ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರಾಗಿದ್ದರು. 2021ರ ನವೆಂಬರ್ 21ರಂದು ಫ್ಯಾಕ್ಟರಿಗೆ ರಜೆಯಿತ್ತು. ಹೀಗಾಗಿ ಕಾರ್ಮಿಕರು ಯಾರೂ ಇರಲಿಲ್ಲ. ಇದೇ ಸಮಯ ಬಳಸಿಕೊಂಡು 8 ವರ್ಷದ ಬಾಲಕಿ ಮೇಲೆ ಮೂವರೂ ಅತ್ಯಾಚಾರ ನಡೆಸಿದ್ದರು. ಬಾಲಕಿ ನೋವಿನಿಂದ ಚೀರಾಡಿದಾಗ ಜಯಸಿಂಗ್ ಒಂದು ಕೈಯಿಂದ ಬಾಲಕಿಯ ಬಾಯನ್ನು ಮುಚ್ಚಿ, ಮತ್ತೊಂದು ಕೈಯಿಂದ ಕುತ್ತಿಗೆ ಹಿಸುಕಿದ್ದಾನೆ. ಪರಿಣಾಮ ಆಕೆ ಅಲ್ಲಿಯೇ ಮೃತಪಟ್ಟಿದ್ದಳು.
ಬಳಿಕ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಇದ್ದ ಕಲ್ಲುಚಪ್ಪಡಿ ಹಾಸಿರುವ ತೋಡಿನಲ್ಲಿ ಇಟ್ಟಿದ್ದರು. ಬಾಲಕಿ ಕಾಣದಿದ್ದಾಗ ಆಕೆಯ ಹೆತ್ತವರು ಹುಡುಕಾಟ ನಡೆಸಿದ ವೇಳೆ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಕೃತ್ಯ ಎಸಗಿದ ಮೂವರು ಹಾಗೂ ಅವರಿಗೆ ಸಹಕರಿಸಿದ ನಾಲ್ಕನೇ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಮೃತ ಬಾಲಕಿಯ ತಾಯಿ ನೀಡಿರುವ ದೂರಿನಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪೋಕ್ಸೋ ಹಾಗೂ ಕೊಲೆ ಪ್ರಕರಣದಲ್ಲಿ ಕೇಸು ದಾಖಲಿಸಿದ್ದರು.