ಬೆಂಗಳೂರು: ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ. ಆದರೆ ಯಾವ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಇಲ್ಲಿಯೇ ಇದ್ದು ಕರ್ನಾಟಕ ಬಿಜೆಪಿಯ ಶುದ್ಧೀಕರಣ ಮಾಡುತ್ತೇನೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಲೇ ರಾಜ್ಯ ನಾಯಕರ ವಿರುದ್ಧ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಅಸಮಾಧಾನ ಹೊರಹಾಕಿದರು.
ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ನಡಿಗೆ: ಸಂಜಯ ನಗರ ನಿವಾಸದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ದುಃಖವಾಗಿದೆ ಎನ್ನುವುದು ನಿಜ. ಕಾಂಗ್ರೆಸ್ನಿಂದ ಆಹ್ವಾನ ಬಂದಿದ್ದೂ ನಿಜ. ಆದರೆ ಕಾಂಗ್ರೆಸ್ ಸೇರುವುದಿಲ್ಲ. ನನ್ನ ಮುಂದಿನ ರಾಜಕೀಯ ನಡೆಯೇನು ಎನ್ನುವ ವಿಚಾರದಲ್ಲಿ ಸ್ಪಷ್ಟವಾಗಿದ್ದೇನೆ. ಕರ್ನಾಟಕದ ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ನಡಿಗೆ ಮುಂದುವರೆಯಲಿದೆ ಎಂದರು.
ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪ ಪಡುತ್ತಾರೆ: ಕಾಂಗ್ರೆಸ್ನಿಂದ ಆಹ್ವಾನ ಇತ್ತು, ಕಾಂಗ್ರೆಸ್ ನಾಯಕರು ನೀವು ಎಲ್ಲಿಯೇ ನಿಲ್ಲಿ ಗೆಲ್ಲಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ. ನಿಮಗಾದ ಅನ್ಯಾಯದ ಪರ ನಿಂತು ಕೆಲಸ ಮಾಡುತ್ತೇವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ ಸೇರಲ್ಲ, ಬಿಜೆಪಿ ತೊರೆಯಲ್ಲ. ಯಾವ ಕಾರಣಕ್ಕೂ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನನ್ನನ್ನು ಅವಮಾನಿಸಿದವರು ಮುಂದೆ ಪಶ್ಚಾತ್ತಾಪ ಪಡುತ್ತಾರೆ. ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೆ ದುಃಖ ಕೊಟ್ಟವರು ಇದ್ದೂ ಸತ್ತಂತೆ, ನನಗೆ ಟಿಕೆಟ್ ತಪ್ಪಿಸಿದವರು ಪಶ್ಚಾತ್ತಾಪ ಪಡುತ್ತಾರೆ ಎಂದು ಹೇಳಿದರು.
ಬಿಜೆಪಿ ಕುಟುಂಬ ರಾಜಕಾರಣ ಮುಕ್ತ ಆಗಬೇಕು: ನಾನು ಕೈಲಾಗದವನಲ್ಲ. ಕೊಟ್ಟ ಕುದುರೆ ಏರಲಾಗದವನಲ್ಲ. ರಾಜ್ಯ ಬಿಜೆಪಿ ಕುಟುಂಬ ರಾಜಕಾರಣ ಮುಕ್ತ ಆಗಬೇಕು. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ನನ್ನ ಕುಟುಂಬ ಅನ್ನೋ ಸಂಸ್ಕೃತಿ ಹೋಗಬೇಕು. ರಾಜ್ಯ ಬಿಜೆಪಿ ಶುದ್ಧೀಕರಣ ಮಾಡಬೇಕು. ಪಕ್ಷಕ್ಕೆ ದುಡಿದವರ ಕಡೆಗಣನೆ ಸರಿಯಲ್ಲ. ಸರ್ವಾಧಿಕಾರಿ ಧೋರಣೆ ರಾಜ್ಯದಲ್ಲಿ ನಡೆಯಲ್ಲ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.