ಸಿಲಿಂಡರ್ ಸ್ಫೋಟ: ಐವರಿಗೆ ಗಂಭೀರ ಗಾಯ, ನಾಲ್ವರ ಸ್ಥಿತಿ ಚಿಂತಾಜನಕ (ETV Bharat) ದಾವಣಗೆರೆ:ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯ ರಾಮನಗರದ ಎಸ್ಓಜಿ ಕಾಲೋನಿಯಲ್ಲಿ ನಡೆದಿದೆ.
ಮಲ್ಲೇಶಪ್ಪ (60) ಲಲಿತಮ್ಮ (50) ಸೌಭಾಗ್ಯ, (36) ಪಾರ್ವತಮ್ಮ(45) ಪ್ರವೀಣ್ (35) ಗಾಯಗೊಂಡವರು. ಮಲ್ಲೇಶಪ್ಪ, ಲಲಿತಮ್ಮ ದಂಪತಿ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಸಿಲಿಂಡರ್ ಸ್ಫೋಟಗೊಂಡಿದೆ. ಸೌಭಾಗ್ಯ, ಪಾರ್ವತಮ್ಮ, ಪ್ರವೀಣ್ ಪಕ್ಕದ ಮನೆಯವರು ಎಂದು ತಿಳಿದು ಬಂದಿದೆ.
ಅಡುಗೆ ಅನಿಲ ಸೋರಿಕೆ ಬಗ್ಗೆ ಪಕ್ಕದ ಮನೆಯ ನಿವಾಸಿಗಳಾದ ಸೌಭಾಗ್ಯ, ಪಾರ್ವತಮ್ಮ, ಪ್ರವೀಣ್ ಗಮನಕ್ಕೆ ತಂದಿದ್ದಾರೆ. ಅನಿಲ ಸೋರಿಕೆ ತಡೆಗಟ್ಟಲು ಮಲ್ಲೇಶಪ್ಪ, ಲಲಿತಮ್ಮ ಮನೆಗೆ ಆಗಮಿಸಿ ಲೈಟ್ ಆನ್ ಮಾಡಿದ್ದೇ ತಡ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ಎರಡು ಮನೆಗಳಿಗೆ ಹಾನಿಯಾಗಿದೆ. ಸ್ಫೋಟದ ಶಬ್ದಕ್ಕೆ ಇಡೀ ಎಸ್ಓಜಿ ಕಾಲೋನಿ ಜನ ಒಮ್ಮೇಲೆ ಬೆಚ್ಚಿಬಿದ್ದಿದ್ದಾರೆ. ಮಲ್ಲೇಶಪ್ಪ, ಲಲಿತಮ್ಮ, ಸೌಭಾಗ್ಯ, ಪಾರ್ವತಮ್ಮ ಒಟ್ಟು ನಾಲ್ವರಿಗೆ ಶೇ 70 ರಷ್ಟು ಸುಟ್ಟ ಗಾಯಗಳಾಗಿವೆ. ಪ್ರವೀಣ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಐವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚು ಸುಟ್ಟಗಾಯಗಳಾಗಿರುವುದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
"ಸಿಲಿಂಡರ್ ಸ್ಫೋಟಕ್ಕೆ ಇಡೀ ನಗರದಲ್ಲಿ ಭಾರಿ ಶಬ್ದ ಬಂದಿದೆ. ಬಾಂಬ್ ಬ್ಲಾಸ್ಟ್ ಆದಂತಹ ಅನುಭವವಾಗಿದೆ. ಬಹಳ ಭೀಕರವಾಗಿ ಸ್ಫೋಟದ ಶಬ್ದ ಕೇಳಿಸಿದೆ. ಸ್ಫೋಟ ಆಗಿದ್ದ ರಭಸಕ್ಕೆ ಇಡೀ ಮನೆಗಳು ಹಾನಿಯಾಗಿವೆ. ವಾಯುವಿಹಾರ ಮಾಡುತ್ತಿರುವಾಗ ಭಾರಿ ಶಬ್ದ ಕೇಳಿತು. ಸ್ಥಳಕೆ ತೆರಳಿದಾಗ ಐವರು ಗಾಯಗೊಂಡಿದ್ದರು. ಅವರನ್ನು ಕಂಡು ತುಂಬಾ ಬೇಸರ ಆಗಿದೆ" ಎಂದು ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ತಿಳಿಸಿದರು.
ಇದನ್ನೂ ಓದಿ:ಸ್ಥಳೀಯ ವಾಹನಗಳಿಗೂ ಟೋಲ್ ಬಿಸಿ: ನಿಗದಿತ ದರಕ್ಕಿಂತ ಹೆಚ್ಚು ಹಣ ಕಡಿತ ಆರೋಪ, ಲಾರಿ ಮಾಲೀಕರ ಜೇಬಿಗೆ ಕತ್ತರಿ - Toll for local vehicles also