ಬೆಳಗಾವಿ:ಮಹಾತ್ಮ ಗಾಂಧೀಜಿ ಅವರ ಮೌಲ್ಯಗಳ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ಇಂದಿನ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದ್ದು, ಐದು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದರು.
ಬೆಳಗಾವಿ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸುಮಾರು 4 ಗಂಟೆಗೂ ಅಧಿಕ ಕಾಲ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಿತು.
ಬಳಿಕ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೆ.ಸಿ. ವೇಣುಗೋಪಾಲ್, ಎರಡು ಪ್ರಸ್ತಾವನೆಗಳ ಮೇಲೆ 50 ಜನ ನಾಲ್ಕು ಗಂಟೆ ಕಾಲ ಸುದೀರ್ಘವಾಗಿ ಮಾತನಾಡಿದರು. ಕಾಂಗ್ರೆಸ್ ಇತಿಹಾಸದಲ್ಲಿ ಇಂದಿನ ಸಭೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿದೆ. ಇಡೀ ದೇಶದ ಕಾಂಗ್ರೆಸ್ ನಾಯಕರು ಹೆಮ್ಮೆಪಡುವ ಸಂದರ್ಭವಿದು. ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷರಾಗಿದ್ದ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮವಿದೆ. ಅದೇ ಜಾಗದಲ್ಲಿ ಇವತ್ತು ಸಭೆ ನಡೆಸಲಾಗಿದೆ. ಮಹಾತ್ಮ ಗಾಂಧೀಜಿ ಅಂದು ಹೇಳಿದ ವಿಚಾರಗಳ ಬಗ್ಗೆ ಈಗಲೂ ಚರ್ಚೆ ಆಗುತ್ತಿದೆ. ಸಮಾನತೆ, ಭ್ರಾತೃತ್ವದ ಬಗ್ಗೆ ಚರ್ಚೆ ನಡೆಯಿತು ಎಂದರು.
ಒಂದು ವರ್ಷ ಬೃಹತ್ ಜನಾಂದೋಲನ ರೂಪಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. 2025ರಲ್ಲಿ ಪಕ್ಷ ಸಂಘಟನೆ ಉತ್ತೇಜನಗೊಳಿಸುವ ನಿರ್ಣಯ ತೆಗೆದುಕೊಂಡಿದ್ದೇವೆ. ತಕ್ಷಣದಿಂದಲೇ ಈ ಕಾರ್ಯಕ್ರಮ ಶುರುವಾಗತ್ತದೆ. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಹೆಸರಿನಲ್ಲಿ ರಾಜಕೀಯ ಆಂದೋಲನ ಮಾಡಲು ತೀರ್ಮಾನಿಸಲಾಗಿದೆ. 2024ರ ಡಿ.27ರಿಂದ 2026ರ ಜ.26ರವರೆಗೆ ಪಾದಯಾತ್ರೆಗಳು ನಡೆಯಲಿವೆ. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಕ್ಯಾಂಪೇನ್ ನಡೆಯಲಿದೆ. ರಾಜ್ಯ ನಾಯಕರು, ರಾಷ್ಟ್ರ ನಾಯಕರು ಎಲ್ಲರೂ ಈ ಜನಾಂದೋಲನದಲ್ಲಿ ಭಾಗಿಯಾಗುತ್ತಾರೆ. ಪಾದಯಾತ್ರೆಗಳು, ಸಮಾವೇಶಗಳು, ವಿಚಾರ ಸಂಕಿರಣಗಳು ನಡೆಯಲಿವೆ. ಇದರ ಜೊತೆಗೆ ಪಕ್ಷವನ್ನು ಬಲಿಷ್ಠಗೊಳಿಸಲು ಸಂಘಟನೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ ಮಾತನಾಡಿ, ಮುಂದಿನ ಫೆಬ್ರುವರಿಯಿಂದ ನವೆಂಬರ್ವರೆಗೆ ಯಾವುದೇ ಚುನಾವಣೆ ಇಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಿದ್ದೇವೆ. ಬ್ಲಾಕ್, ಮಂಡಳ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಂಘಟನೆ ನಡೆಯಲಿದೆ. ಒಂದೇ ವರ್ಷದಲ್ಲಿ ಸಂಘಟನೆ ಮುಗಿಸಲಿದ್ದೇವೆ. ನಾಳೆಯಿಂದ ಈ ಸಮಾವೇಶ ಆರಂಭವಾಗಿ, 2026ರ ಜನವರಿ 26ರಂದು ಅಂಬೇಡ್ಕರ್ ಅವರ ಜನ್ಮಸ್ಥಳದಲ್ಲಿ ಸಮಾವೇಶ ಮುಕ್ತಾಯ ಆಗಲಿದೆ ಎಂದು ಮಾಹಿತಿ ನೀಡಿದರು.
ಮುಂದಿನ ಒಂದು ವರ್ಷ ಸಂವಿಧಾನ ಉಳಿಸಿ ಪಾದಯಾತ್ರೆ ನಡೆಯುತ್ತದೆ. ಪ್ರಸ್ತುತ ಸಮಸ್ಯೆಗಳನ್ನು ಇಟ್ಟುಕೊಂಡು ಪ್ರತಿ ಹಳ್ಳಿಯಲ್ಲಿ ಈ ಪಾದಯಾತ್ರೆ ಹೋಗಲಿದ್ದೇವೆ. ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ಸಿಗೆ ಸಂಜೀವಿನಿ ಸಿಕ್ಕಿದೆ. ಅದೇ ಮಾದರಿಯಲ್ಲಿ ಈ ಪಾದಯಾತ್ರೆಯೂ ನಡೆಯಲಿದೆ ಎಂದು ವಿವರಿಸಿದರು.