ಬೆಂಗಳೂರು:ರಾಜ್ಯದ ಆರ್ಥಿಕತೆ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡಿರುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ. ತೆರಿಗೆ ಸಂಗ್ರಹ ವಾರ್ಷಿಕ ಗುರಿಯ 53% ಸಾಧಿಸಲಾಗಿದ್ದು, ತ್ವರಿತಗತಿಯಲ್ಲಿ ಬೆಳವಣಿಗೆ ಕಾಣುತ್ತಿರುವುದಾಗಿ ಬೆನ್ನು ತಟ್ಟಿಕೊಂಡಿದೆ. ಆದರೆ, ರಾಜ್ಯದ ತೆರಿಗೆ ಸಂಗ್ರಹದ ಸ್ಥಿತಿಗತಿಯ ಅಂಕಿಅಂಶ ಬೇರೆಯದೇ ಚಿತ್ರಣ ತೋರಿಸುತ್ತಿದೆ.
ರಾಜ್ಯ ನಾಯಕರಿಗೆ ಖರ್ಗೆ ಬುದ್ಧಿಮಾತು: ಶಕ್ತಿ ಯೋಜನೆ ಪರಿಷ್ಕರಣೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಗ್ಯಾರಂಟಿ ಬಗ್ಗೆ ರಾಜ್ಯ ನಾಯಕರಿಗೆ ನೀಡಿದ ಬುದ್ಧಿಮಾತು ಮತ್ತಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಬಜೆಟ್ ಮೀರಿ ಗ್ಯಾರಂಟಿ ಘೋಷಣೆ ಮಾಡಿದರೆ ಸರ್ಕಾರ ದಿವಾಳಿಯಾಗಲಿದೆ ಎಂದಿರುವುದು, ಒಂದು ಬಟ್ಟಿ ರಸ್ತೆ ಗುಂಡಿಗೆ ಮಣ್ಣು ಹಾಕಲೂ ಹಣ ಇಲ್ಲದಂತಾಗುತ್ತದೆ ಎಂಬ ಅವರ ಹೇಳಿಕೆ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ಗ್ಯಾರಂಟಿ ಮತ್ತು ಆರ್ಥಿಕ ದಿವಾಳಿ ಕುರಿತಾಗಿ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಆರ್ಥಿಕತೆ ಏರುಗತಿಯಲ್ಲಿ -ಸಿಎಂ: ಈ ಮಧ್ಯೆ ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆ ಏರುಗತಿಯಲ್ಲಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಜೆಟ್ ಗುರಿಯ ಸುಮಾರು 53% ಆದಾಯ ಸಂಗ್ರಹ ಮಾಡಿರುವುದಾಗಿ ತಿಳಿಸಿದ್ದಾರೆ. ರಾಜ್ಯದ ಆರ್ಥಿಕತೆ ತ್ವರಿತಗತಿಯಲ್ಲಿ ವೃದ್ಧಿ ಕಾಣುತ್ತಿದ್ದು, ಆದಾಯ ಸಂಗ್ರಹ ಹೆಚ್ಚಿರುವ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷದ ತೆರಿಗೆ ಸಂಗ್ರಹದಲ್ಲಿ 11.2% ಪ್ರಗತಿ ಕಂಡಿದ್ದು, ರಾಜ್ಯದ ಸದೃಢ ಆರ್ಥಿಕ ಬೆಳವಣಿಗೆ, ಗ್ರಾಹಕರ ಬೇಡಿಕೆ, ಉತ್ತಮ ಆಡಳಿತದ, ಸರ್ಕಾರದ ಆರ್ಥಿಕ ನೀತಿ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ. ಪಂಚ ಗ್ಯಾರಂಟಿ ಜೊತೆಗೆ ರಾಜ್ಯದ ರಾಜಸ್ವ ಸಂಗ್ರಹ ವೃದ್ಧಿ ಕಾಣುತ್ತಿದ್ದು, ಅಭೂತಪೂರ್ವ ವಿತ್ತೀಯ ನಿರ್ವಹಣೆ ತೋರುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ, ರಾಜಸ್ವ ಸಂಗ್ರಹದ ಪ್ರಸಕ್ತ ಹಾಗೂ ಹಿಂದಿನ ಅಂಕಿಅಂಶಗಳನ್ನು ನೋಡಿದರೆ ಬೇರೆಯದೇ ಚಿತ್ರಣ ತೋರಿಸುತ್ತಿದೆ.
ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ತೆರಿಗೆ ಸಂಗ್ರಹಿಸುವ ಪ್ರಮುಖ ಐದು ಇಲಾಖೆಗಳ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತೆರಿಗೆ ಸಂಗ್ರಹಕ್ಕೆ ಚುರುಕು ಮುಟ್ಟಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಪ್ರತಿ ತಿಂಗಳು ವನ್ ಟು ವನ್ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಮೊನ್ನೆ ನಡೆದ ಸಭೆಯಲ್ಲಿ ಅಕ್ಟೋಬರ್ವರೆಗೆ ಅಂದರೆ ಪ್ರಸಕ್ತ ಬಜೆಟ್ ವರ್ಷದ ಏಳು ತಿಂಗಳಲ್ಲಿ ಒಟ್ಟು 1,03,689 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿರುವುದಾಗಿ ಅಂಕಿಅಂಶ ನೀಡಿದೆ. ಆ ಮೂಲಕ ಬಜೆಟ್ ಗುರಿಯ ಸುಮಾರು 53% ಆದಾಯ ಸಂಗ್ರಹಿಸಲಾಗಿದೆ.
ಅಂಕಿಅಂಶಗಳು ಹೇಳುವುದೇನು?:2024-25 ಸಾಲಿನಲ್ಲಿ ಒಟ್ಟು ಸ್ವಂತ ರಾಜಸ್ವ ತೆರಿಗೆ ಸಂಗ್ರಹದ ವಾರ್ಷಿಕ ಬಜೆಟ್ ಗುರಿ 1,96,525 ಕೋಟಿ ರೂ. ಆಗಿದೆ. ಆದರೆ ಏಳು ತಿಂಗಳಾದರೂ ಬಜೆಟ್ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ವಾರ್ಷಿಕ ಬಜೆಟ್ ಗುರಿಯ ಪ್ರಕಾರ 7 ತಿಂಗಳಲ್ಲಿ ಪ್ರಮುಖ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಶುಲ್ಕ, ಗಣಿಗಾರಿಕೆ ತೆರಿಗೆ ರೂಪದಲ್ಲಿ 1,14,640 ಕೋಟಿ ರೂ. ಸಂಗ್ರಹಿಸಬೇಕಾಗಿತ್ತು. ಆದರೆ, ಈವರೆಗೆ 1,03,689 ಕೋಟಿ ರೂ. ಸಂಗ್ರಹಿಸಲಾಗಿದ್ದು, ಬಜೆಟ್ ಗುರಿ ಮುಂದೆ 10,951 ಕೋಟಿ ರೂ. ಸಂಗ್ರಹ ಕುಂಟಿತ ಕಂಡಿದೆ.
ವರ್ಷಂಪ್ರತಿ ರಾಜ್ಯದ ತೆರಿಗೆ ಸಂಗ್ರಹದ ಪ್ರಗತಿ ಕನಿಷ್ಟ 10-15% ರಷ್ಟು ಇರುತ್ತದೆ. ಈ ಬಾರಿಯೂ ಏಳು ತಿಂಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 11.2% ಪ್ರಗತಿ ಕಂಡಿದೆ. ಆದರೆ, ಪ್ರಸಕ್ತ ಬಜೆಟ್ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. 2024-25 ನೇ ಸಾಲಿನಲ್ಲಿ ಒಟ್ಟು ವಾಣಿಜ್ಯ ತೆರಿಗೆ ಸಂಗ್ರಹ ಗುರಿ 1,10,000 ಕೋಟಿ ರೂ. ನಿಗದಿಯಾಗಿದೆ. ಅಕ್ಟೋಬರ್ ಅಂತ್ಯದವರೆಗೆ ಒಟ್ಟು ರೂ. 58,773 ಕೋಟಿ ಸಂಗ್ರಹಿಸಲಾಗಿದೆ. ಬಜೆಟ್ ಗುರಿಯಂತೆ ಅಕ್ಟೋಬರ್ವರೆಗೆ 64,166 ಕೋಟಿ ರೂ. ಸಂಗ್ರಹಿಸಬೇಕಾಗಿತ್ತು. ಅಂದರೆ, ಗುರಿಗೆ 5,394 ಕೋಟಿ ರೂ. ಕುಂಠಿತವಾಗಿದೆ.