ಕಡಬ (ದಕ್ಷಿಣ ಕನ್ನಡ):ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಪತ್ತೆಯಾದ ಮೃತ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಇದೇ ಕಾರಣದಿಂದ ಸಾವನ್ನಪ್ಪಿದೆ ಎನ್ನುವುದು ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿದೆ.
ಶುಕ್ರವಾರ ಮೃತಪಟ್ಟ ಮೊಸಳೆಯನ್ನು ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್ ಅವರು ಮರಣೋತ್ತರ ಪರೀಕ್ಷೆ ನಡೆಸುವಾಗ ಮೊಸಳೆಯ ಹೊಟ್ಟೆಯಲ್ಲಿ 1 ಕೆಜಿಗೂ ಅಧಿಕ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್‌ಗಳು ಪತ್ತೆಯಾಗಿತ್ತು. ಈ ತ್ಯಾಜ್ಯ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೇ ಅನಾರೋಗ್ಯದಿಂದ ಮೊಸಳೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಇದು ಹೆಣ್ಣು ಮೊಸಳೆಯಾಗಿದ್ದು, ಸುಮಾರು ನಾಲ್ಕು ವರ್ಷದ್ದು ಎಂದು ಅಂದಾಜಿಸಲಾಗಿದೆ. ಮೊಸಳೆಯ ಅನುಮಾನಾಸ್ಪದ ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸುವ ವೇಳೆ ಉತ್ತರ ಸಿಕ್ಕಿದೆ. ಮೊಸಳೆಯ ಹೊಟ್ಟೆಯೊಳಗೆ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಮತ್ತಿತರ ತ್ಯಾಜ್ಯಗಳು ಪತ್ತೆಯಾಗಿದೆ.
ಕಡಬ - ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿತ್ತು. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುಳ್ಯ ಅರಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್, ಉಪ ವಲಯಾರಣ್ಯಾಧಿಕಾರಿಗಳಾದ ಸುಬ್ರಹ್ಮಣ್ಯ, ಅಜಿತ್ ಮತ್ತಿತರರು ಮೊಸಳೆಯ ಕಳೇಬರ ಅಂತ್ಯಕ್ರಿಯೆ ವೇಳೆ ಹಾಜರಿದ್ದರು.
ಇದನ್ನೂ ಓದಿ:ಮೈಸೂರು: ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ... ವಿಡಿಯೋ...
ತುರ್ತು ಕ್ರಮಕ್ಕೆ ಆಗ್ರಹ:ನಿಷೇಧಿತ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ನದಿಗೆ ಎಸೆಯುವುದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಕೆಲವರು ಕಾನೂನು ಉಲ್ಲಂಘಿಸಿ ನದಿಗೆ ಕೋಳಿ ಹಾಗೂ ದನದ ತ್ಯಾಜ್ಯ ಎಸೆಯುತ್ತಾರೆ ಎನ್ನುವ ದೂರು ಕೇಳಿಬರುತ್ತಿದೆ. ಇದಕ್ಕೆ ಸ್ಥಳೀಯಾಡಳಿತ ತುರ್ತು ಕ್ರಮ ಜರುಗಿಸಬೇಕಾಗಿದೆ. ಈಗಾಗಲೇ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ತ್ಯಾಜ್ಯಗಳನ್ನು ಎಸೆಯುವುದರಿಂದ ನೀರು ಮಲಿನವಾಗುತ್ತಿದೆ. ಇದನ್ನು ಬಳಕೆ ಮಾಡಿದರೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಸ್ಥಳೀಯಾಡಳಿತ ನಿಗಾ ವಹಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಮನೆ ಬಾಗಿಲಿಗೆ ಬಂದ ಭಾರಿ ಗಾತ್ರದ ಮೊಸಳೆ, ಬೆಚ್ಚಿಬಿದ್ದ ಕುಟುಂಬಸ್ಥರು - Crocodile Found