ಕರ್ನಾಟಕ

karnataka

ETV Bharat / state

ಕುತ್ತಿಗೆಮಟ್ಟ ಮಣ್ಣಲ್ಲಿ ಹೂತುಕೊಂಡು ರುದ್ರಭೂಮಿ ಕಾರ್ಮಿಕರ ಪ್ರತಿಭಟನೆ - ರಾಜ್ಯ ಸ್ಮಶಾನ ಕಾರ್ಮಿಕರ ಸಂಘ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಮಶಾನ ಕಾರ್ಮಿಕರು ತಮ್ಮ ದೇಹವನ್ನು ಕುತ್ತಿಗೆಮಟ್ಟ ಮಣ್ಣಲ್ಲಿ ಹೂತುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

crematorium-workers-protest-for-demand-fulfillment-of-various-demands
ರಾಯಚೂರು: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರುದ್ರಭೂಮಿ ಕಾರ್ಮಿಕರಿಂದ ವಿಭಿನ್ನ ಪ್ರತಿಭಟನೆ

By ETV Bharat Karnataka Team

Published : Feb 14, 2024, 4:22 PM IST

Updated : Feb 14, 2024, 5:10 PM IST

ಕುತ್ತಿಗೆಮಟ್ಟ ಮಣ್ಣಲ್ಲಿ ಹೂತುಕೊಂಡು ರುದ್ರಭೂಮಿ ಕಾರ್ಮಿಕರ ಪ್ರತಿಭಟನೆ

ರಾಯಚೂರು: ರುದ್ರಭೂಮಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರೆಂದು ಪರಿಗಣಿಸಿ, ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿ ರಾಯಚೂರಿನಲ್ಲಿಂದು ಸ್ಮಶಾನ ಕಾರ್ಮಿಕರು ಕುತ್ತಿಗೆಮಟ್ಟ ಮಣ್ಣಲ್ಲಿ ಹೂತುಕೊಂಡು ಎಂಬ ವಿಭಿನ್ನ ಪ್ರತಿಭಟನೆ ನಡೆಸಿದರು. ಇಲ್ಲಿನ ಜಲಾಲ್ ನಗರದ ಸಾರ್ವಜನಿಕ ಸ್ಮಶಾನದಲ್ಲಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಕಾರ್ಮಿಕರು ಹಾಗೂ ಓರ್ವ ಕಾರ್ಮಿಕ ಕುತ್ತಿಗೆ ಮಟ್ಟ ಮಣ್ಣಲ್ಲಿ ಹೂತುಕೊಂಡು ಪ್ರತಿಭಟಿಸುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ತಲೆತಲೆಮಾರುಗಳಿಂದ ಗ್ರಾಮೀಣ ಪ್ರದೇಶ, ಪಟ್ಟಣ, ನಗರಗಳಲ್ಲಿರುವ ರುದ್ರಭೂಮಿಗಳಲ್ಲಿ ಕೆಲಸ ಮಾಡುತ್ತಾ ಬರುತ್ತಿರುವ ಕಾರ್ಮಿಕರಿಗೆ ಸರ್ಕಾರದಿಂದ ಸವಲತ್ತು ಸಿಗುತ್ತಿಲ್ಲ. ಈ ಕಾರ್ಮಿಕರಿಗೆ ಸರ್ಕಾರ ಸೌಲಭ್ಯ ಒದಗಿಸುವಂತೆ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಬೇಡಿಕೆಗಳೇನು?: ಫೆ.16ರಂದು ಮಂಡನೆಯಾಗುವ ರಾಜ್ಯ ಬಜೆಟ್​ನಲ್ಲಿ ರುದ್ರಭೂಮಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆ ನೌಕರನೆಂದು ಪರಿಗಣಿಸಿ ಕನಿಷ್ಠ ವೇತನ ನೀಡಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರುದ್ರಭೂಮಿಯಲ್ಲಿ ಗುಂಡಿ ಅಗೆಯುವುದು, ಮುಚ್ಚುವುದಕ್ಕೆ 3,500 ಸಾವಿರ ರೂ ಕೂಲಿ ಹಣ ಪಾವತಿಸಬೇಕು. 45 ವರ್ಷದ ಮೇಲ್ಪಟ್ಟವರಿಗೆ 3 ರೂಪಾಯಿ ಮಾಸಿಕ ಪಿಂಚಣಿ ನೀಡಬೇಕು. ರುದ್ರಭೂಮಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಬೇಕು. ಗುಂಡಿ ಅಗೆಯಲು ಪರಿಕರಗಳನ್ನು ಕೊಡಬೇಕು. ಬೋರ್​ವೆಲ್ ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಬೇಕು. ಒಂದು ಕೊಠಡಿಯನ್ನು ನಿರ್ಮಿಸಬೇಕು. ಒತ್ತುವರಿ ಆಗಿರುವ ಸ್ಮಶಾನದ ಜಾಗ ತೆರವುಗೊಳಿಸಬೇಕು. ಸ್ಮಶಾನವಿಲ್ಲದ ಕಡೆ ಭೂಮಿ ನೀಡಬೇಕು. ಪ್ರತೀ ಊರು, ಪಟ್ಟಣ, ನಗರದಲ್ಲಿರುವ ಸ್ಮಶಾನಕ್ಕೆ ಒಬ್ಬ ಕಾರ್ಮಿಕನನ್ನು ನೇಮಿಸಿಕೊಳ್ಳಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ರಾಯಚೂರು ತಹಶೀಲ್ದಾರ್ ಸುರೇಶ್​ ವರ್ಮ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಗುವುದಾಗಿ ತಿಳಿಸಿದರು.

ಸಿಐಟಿಯು ಮುಖಂಡ ಕೆ.ಜಿ.ವೀರೇಶ್ ಮಾತನಾಡಿ, "ಕರ್ನಾಟಕ ರಾಜ್ಯ ಸ್ಮಶಾನ ಕಾರ್ಮಿಕರ ಸಂಘದಿಂದ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳ ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಸ್ಮಶಾನ ಕಾರ್ಮಿಕರಿಗೆ ಯಾವುದೇ ರೀತಿಯ ವೇತನ, ಅನುದಾನ ನೀಡುತ್ತಿಲ್ಲ. ಹೀಗಾಗಿ ಸ್ಮಶಾನ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರು ಎಂದು ನೇಮಕಾತಿ ಮಾಡಿಕೊಳ್ಳಬೇಕು. ಗುಂಡಿ ಅಗೆಯುವುದನ್ನು ಮತ್ತು ಮುಚ್ಚುವುದನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪರಿಗಣಿಸಿ ಒಂದು ಗುಂಡಿ ಅಗೆದರೆ 3,500 ವೇತನವನ್ನು ಕಾರ್ಮಿಕರಿಗೆ ಕೊಡಬೇಕು. ಒತ್ತುವರಿಯಾಗಿರುವ ಸ್ಮಶಾನಗಳನ್ನು ತೆರವು ಮಾಡಿ ಅವುಗಳನ್ನು ಸಂರಕ್ಷಿಸಿ, ಸುತ್ತಲೂ ಕಾಂಪೌಂಡ್​ ನಿರ್ಮಾಣ ಮಾಡಬೇಕು" ಎಂದು ಒತ್ತಾಯಿಸಿದರು.

ಇದನ್ನೂ ಓದಿ:ದೆಹಲಿಯಲ್ಲಿ ರೈತರ ಬಂಧನ ಖಂಡಿಸಿ ರಾಜ್ಯದ ಗ್ರಾಮೀಣ ಭಾಗ ಬಂದ್​ಗೆ ಚಿಂತನೆ: ಬಡಗಲಪುರ ನಾಗೇಂದ್ರ

Last Updated : Feb 14, 2024, 5:10 PM IST

ABOUT THE AUTHOR

...view details