ರಾಮನಗರ: ಇಂದಿನಿಂದ ಬೊಂಬೆನಗರಿ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆ ರಣಕಣ ರಂಗೇರಿದೆ. ಸಾವಿರಾರು ಬೆಂಬಲಿಗರ ಜೊತೆ ಮೆರವಣಿಗೆ ಮೂಲಕ ತೆರಳಿ ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಸಿ.ಪಿ. ಯೋಗೇಶ್ವರ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಸಿಎಂ ಡಿಸಿಎಂ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ಸಿಪಿವೈ ನಾಮಪತ್ರ ಸಲ್ಲಿಕೆ:ಇಂದು ಬೆಳಗ್ಗೆ 11 ಗಂಟೆಗೆ ಮೆರವಣಿಗೆ ಮೂಲಕ ತೆರಳಿ ಸಿಪಿವೈ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ಹಳೆ ಬೆಂಗಳೂರು ಮೈಸೂರು ಹೆದ್ದಾರಿಯ ಸ್ಪನ್ ಸಿಲ್ಕ್ ಮಿಲ್ನಿಂದ ಸಿಎಂ ಹಾಗೂ ಡಿಸಿಎಂ ಅವರೇ ಸ್ವತಃ ನೇತೃತ್ವ ವಹಿಸಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದರು. ಬೃಹತ್ ಮೆರವಣಿಗೆ ಮೂಲಕ ಸಿಪಿವೈ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಗೂ ಗುಡ್ಬೈ ಹೇಳಿ ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಯೋಗೇಶ್ವರ್ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಮಾಡುವ ಮೂಲಕ ನಾಮಪತ್ರ ಸಲ್ಲಿಸಿ, ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
50 ಸಾವಿರ ಮತಗಳಿಂದ ಗೆಲ್ಲಬೇಕು:ರೋಡ್ ಶೋ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,''ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ನಾನೂ ನೋಡುತ್ತೇನೆ. ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಜಯ ಗಳಿಸಬೇಕು'' ಎಂದು ಕರೆ ನೀಡಿದರು.
ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ (ETV Bharat) ''ಕೆರೆಗಳಿಗೆ ಜೀವದಾನ ಮಾಡಿದ ಯೋಗೇಶ್ವರ್ ಅಭಿವೃದ್ಧಿ ಪರವಾಗಿ ಇರುವುದರಿಂದಲೇ ಐದು ಬಾರಿ ಶಾಸಕರಾಗಿದ್ದು, ಕಾಂಗ್ರೆಸ್ಗೆ ಮರಳಿದ್ದಾರೆ. ಇವರನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಯೋಗೇಶ್ವರ್ ಗೆಲ್ಲುವ ಮೂಲಕ ಚನ್ನಪಟ್ಟಣದಲ್ಲಿ ನಿಂತು ಹೋಗಿರುವ ಅಭಿವೃದ್ಧಿಗೆ ಮರು ಚಾಲನೆ ನೀಡಿ'' ಎಂದು ತಿಳಿಸಿದರು.
''ಕುಮಾರಸ್ವಾಮಿಗೆ ಚನ್ನಪಟ್ಟಣ ಮರೆತುಹೋಗಿ ಮಂಡ್ಯಕ್ಕೆ ಸೀಮಿತರಾಗಿದ್ದಾರೆ. ಬಿಜೆಪಿ ಒಕ್ಕೂಟದಿಂದ ಕುಮಾರಸ್ವಾಮಿಯೇ ನಿಲ್ಲಲಿ, ನಿಖಿಲ್ ಕುಮಾರಸ್ವಾಮಿಯೇ ನಿಲ್ಲಲಿ, ಅನಿತಾ ಕುಮಾರಸ್ವಾಮಿಯವರೇ ನಿಲ್ಲಲಿ. ಇಲ್ಲಿ ಕಾಂಗ್ರೆಸ್ ಪಕ್ಷದ ಯೋಗೇಶ್ವರ್ ಅವರೇ ಭರ್ಜರಿ ಜಯಗಳಿಸೋದು ಖಚಿತ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಕಲ್ಯಾಣದ ಸರ್ಕಾರದಲ್ಲಿ ಯೋಗೇಶ್ವರ್ ಇರ್ತಾರೆ: ''ನಮ್ಮದು ಜನಕಲ್ಯಾಣದ ಸರ್ಕಾರ. ಈ ಸರ್ಕಾರದಲ್ಲಿ ಯೋಗೇಶ್ವರ್ ಅವರು ಇರಬೇಕು. ಹೆಚ್.ಡಿ.ಕುಮಾರಸ್ವಾಮಿ ಶಾಸಕರಾಗಿ, ಮುಖ್ಯಮಂತ್ರಿ ಆಗಿದ್ದಾಗಲೂ ಮಾಡದ ಚನ್ನಪಟ್ಟಣದ ಅಭಿವೃದ್ಧಿ ಕೆಲಸಗಳು, ಮುಂದಿನ ತಿಂಗಳಿನಿಂದ ಶಾಸಕರಾಗಿ ಯೋಗೇಶ್ವರ್ ಮುಂದುವರೆಸುತ್ತಾರೆ. ಇವತ್ತು ನಾಮಪತ್ರ ಸಲ್ಲಿಕೆ ಬಳಿಕ ನಾನು ಮತ್ತೆ ಚನ್ನಪಟ್ಟಣಕ್ಕೆ ಪ್ರಚಾರಕ್ಕೆ ಬರುತ್ತೇನೆ'' ಎಂದರು.
ಬಿಜೆಪಿ ಬಗ್ಗೆ ವಿಶ್ಲೇಷಣೆ ಮಾಡಲ್ಲ- ಡಿ.ಕೆ.ಶಿವಕುಮಾರ್: ''ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ದುರ್ಬಲವೆಂದು ತೋರಿಸಿಕೊಂಡಿದೆ ಎನ್ನುವ ಸಿ.ಟಿ.ರವಿ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿದಾಗ, ''ಬಿಜೆಪಿಯವರು ಹಾಗೂ ಬಿಜೆಪಿ ಬಗ್ಗೆ ನಾನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ವಿಶ್ಲೇಷಣೆಯನ್ನು ತೀವ್ರವಾಗಿ ಮಾಡಬಹುದು, ಆದರೆ ಮಾಡುವುದಿಲ್ಲ'' ಎಂದರು.
ಬಿಜೆಪಿಯ ಕೆಲ ನಾಯಕರಿಂದಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ ಎಂಬ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ''ನಾನು ಸಿ.ಟಿ.ರವಿಯವರ ಹೇಳಿಕೆಗೆ ಮಾತ್ರ ಉತ್ತರ ನೀಡುತ್ತಿದ್ದು, ಮಿಕ್ಕ ಚರ್ಚೆ, ವಿಶ್ಲೇಷಣೆಯನ್ನು ನೀವು ಮಾಡಿ. ಮಾಧ್ಯಮದವರು ಹೆಚ್ಚು ವ್ಯಾಖ್ಯಾನ ಮಾಡುವುದರಿಂದ ಇದರ ಸಾಧಕ-ಬಾಧಕಗಳು ಹಾಗೂ ಕಳೆದ ಒಂದು ವಾರಗಳಿಂದ ನಡೆದ ವಿದ್ಯಮಾನಗಳನ್ನು ರಾಜ್ಯದ ಜನರಿಗೆ ನೀವು ತಿಳಿಸಬೇಕು'' ಎಂದರು.
ನಿಖಿಲ್ ಅಥವಾ ಅನಸೂಯಾ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ, ''ಅದು ಆಯಾಯ ಪಕ್ಷದ ತೀರ್ಮಾನ'' ಎಂದು ಡಿಕೆಶಿ, ಚನ್ನಪಟ್ಟಣದಲ್ಲಿ ಜೆಡಿಎಸ್ನಿಂದ ಪ್ರಬಲ ವ್ಯಕ್ತಿಯನ್ನೇ ಕಾಂಗ್ರೆಸ್ಗೆ ಕರೆತರಲಾಗುತ್ತದೆ ಎನ್ನುವ ಸುದ್ದಿಯ ಬಗ್ಗೆ ಕೇಳಿದಾಗ, ''ಕಾದು ನೋಡೋಣ'' ಎಂದಷ್ಟೇ ಉತ್ತರಿಸಿದರು.
ಚನ್ನಪಟ್ಟಣದಲ್ಲಿ ಸ್ಪರ್ಧಿಸಲ್ಲ ಎಂದಿದ್ದೆ- ಡಿ.ಕೆ.ಸುರೇಶ್:ಚನ್ನಪಟ್ಟಣದಲ್ಲಿ ನಿಮಗೆ ಟಿಕೆಟ್ ನೀಡಲು ಶಿವಕುಮಾರ್ ಅವರು ಹಿಂದೇಟು ಹಾಕಿದರು ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ''ನಾನು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ತಕ್ಷಣ ಇನ್ನೊಂದು ಚುನಾವಣೆಗೆ ನಿಂತರೆ, ಜನರಿಗೆ ಒಳ್ಳೆಯ ಸಂದೇಶ ನೀಡಿದಂತೆ ಆಗುವುದಿಲ್ಲ. ಹೀಗಾಗಿ, ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೈಕಮಾಂಡ್ ಹಾಗೂ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಅನೇಕ ಕಾರ್ಯಕರ್ತರು ನಾನೇ ನಿಲ್ಲಬೇಕು ಎಂದು ಹೇಳಿದರು. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ'' ಎಂದರು.
ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು:ಪಕ್ಷದಲ್ಲಿ ಯೋಗೇಶ್ವರ್ ಮೂರು ವರ್ಷ ದುಡಿದ ನಂತರ ಟಿಕೆಟ್ ನೀಡಿ ಎನ್ನುವ ಕಾರ್ಯಕರ್ತರ ಹೇಳಿಕೆಗಳ ಬಗ್ಗೆ ಕೇಳಿದಾಗ, ''ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಾವು, ಮುಖಂಡರು, ಕಾರ್ಯಕರ್ತರಾದಿಯಾಗಿ ಎಲ್ಲರೂ ಪಕ್ಷ ತೆಗೆದುಕೊಂಡಿರುವ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಿರುತ್ತದೆ. ನಾಮಪತ್ರ ಸಲ್ಲಿಕೆಯಾದ ನಂತರ ಎಲ್ಲರ ಬಳಿಯೂ ನಾನೇ ಖುದ್ದಾಗಿ ಮಾತನಾಡುತ್ತೇನೆ'' ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗ ರೆಡ್ಡಿ, ಸಚಿವರಾದ ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ಹಾಗೂ ಸರ್ಕಾರದ ಇನ್ನೂ ಹಲವು ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ರಾಜ್ಯ ಮಟ್ಟದ ಅನೇಕ ನಾಯಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ತಾಲೂಕು ಮಟ್ಟದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ: ಬಿಜೆಪಿಗೆ ಬಂಡಾಯ ಬಿಸಿ, ಕಾಂಗ್ರೆಸ್ಗೆ ಅಭ್ಯರ್ಥಿ ಆಯ್ಕೆ ಕಗ್ಗಂಟು!