ವಿನೋದ್ ಪತ್ನಿ ಪ್ರವಿದಾ ಮಾತನಾಡಿದರು (ETV Bharat) ಚಾಮರಾಜನಗರ : ಕೇರಳದ ಭೂ ಕುಸಿತದಲ್ಲಿ ಕ್ಷಣ ಮಾತ್ರದಲ್ಲಿ ಚಾಮರಾಜನಗರದ ಕುಟುಂಬವೊಂದು ಬಚಾವ್ ಆದ ಘಟನೆ ವಯನಾಡಿನ ಚೂರಲ್ ಮಲೆಯಲ್ಲಿ ನಡೆದಿದೆ. ಚೂರಲ್ ಮಲೆಯಲ್ಲಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬವರು ಪಾರಾಗಿದ್ದು, ಮೆಪಾಡಿಯಲ್ಲಿದ್ದ ಪ್ರವಿದಾ, ಲಕ್ಷ್ಮಿ, ಪುಟ್ಟಸಿದ್ದಮ್ಮ ಮತ್ತು 2 ತಿಂಗಳ ಮಗು ಚಾಮರಾಜನಗರಕ್ಕೆ ಸುರಕ್ಷಿತವಾಗಿ ಬಂದಿದ್ದಾರೆ.
ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮಿ ಹಾಗೂ ಪುಟ್ಟಸಿದ್ದಮ್ಮ ಮೆಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್ ಮಲೆಯಲ್ಲಿದ್ದರು. ಚೂರಲ್ ಮಲೆಗೂ ಮೆಪಾಡಿಗೂ 6 ಕಿ ಮೀ ದೂರದಲ್ಲಿದ್ದು, ಭೂ ಕುಸಿತ ಉಂಟಾಗುವ ಕೆಲವೇ ಸಮಯಕ್ಕೂ ಮುನ್ನ ಸುರಕ್ಷಿತ ಸ್ಥಳಕ್ಕೆ ಬಂದಿದ್ದಾರೆ.
ಕುಟುಂಬ ಕಾಪಾಡಿದ ಹಸು : ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿ, ಅಳುವ ಸದ್ದು ಮಾಡಿದೆ. ಕೂಡಲೇ ಎಚ್ಚೆತ್ತ ವಿನೋದ್ ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿದ್ದನ್ನು ಕಂಡು ಕೂಡಲೇ ವಿನೋದ್ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ.
ಬಳಿಕ ನೋಡ ನೋಡುತ್ತಿದ್ದಂತೆ ತಾವಿದ್ದ ಮನೆ, ವಾಹನ ಎಲ್ಲವೂ ಮಾಯವಾದಂತೆ ಭೂಮಿಯಡಿ ಹುದುಗಿಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ. ಕೂಡಲೇ ಮೆಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದರಿಂದ ಪ್ರವಿದಾ, ಶ್ರೀಲಕ್ಷ್ಮಿ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಬಂದು ಕಾರು ಮೂಲಕ ಚಾಮರಾಜನಗರಕ್ಕೆ ಮಂಗಳವಾರ ಸಂಜೆ ತಲುಪಿದ್ದಾರೆ.
ರಕ್ಷಣಾಪಡೆಯಿಂದ ರಕ್ಷಣೆ : ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತ್ತರನ್ನು ರಕ್ಷಣಾಪಡೆ ಮಂಗಳವಾರ ಸಂಜೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಸಾಕಿದ್ದ ಹಸು ದೇವರಂತೆ ಕುಟುಂಬಕ್ಕೆ ಅಪಾಯದ ಬಗ್ಗೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರು ಮಾಡಿದೆ.
'ನಮ್ಮ ಪತಿ ನನಗೆ ಫೋನ್ ಮಾಡಿ ಪ್ರವಾಹ ಬಂದಿದೆ, ಮನೆ ಎಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ. ನಾವೆಲ್ಲ ಸೇಫ್ ಆಗಿದ್ದೇವೆ ಎಂದರು. ನಿಮಗೆ ಹೇಗೆ ಗೊತ್ತಾಯ್ತು ಎಂದೆ? ಅದಕ್ಕವರು 1 :45 ರಿಂದ ಮನೆಯಲ್ಲಿ ಹಸು ಒದರುತ್ತಾ ಇತ್ತು, ಏಕೆ ಹಸು ಕರೆಯುತ್ತಿದೆ ಎಂದು ಹೋಗಿ ನೋಡಿದೆ. ಆಗ ಕೊಟ್ಟಿಗೆಯಲ್ಲಿ ನೀರು ಬಂದಿತ್ತು ಎಂದು ತಿಳಿಸಿದರು. ಆ ಹಸು ಕೂಗಿಕೊಂಡಿದ್ದರಿಂದ ಇವರು ಬಚಾವ್ ಆದ್ರು' ಎಂದು ವಿನೋದ್ ಪತ್ನಿ ಪ್ರವಿದಾ ತಿಳಿಸಿದ್ದಾರೆ.
'ಭೂ ಕುಸಿತ ಸಂಭವಿಸಿರುವಲ್ಲಿಗೆ ನಮ್ಮ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ನಮ್ಮ ಮಗಳನ್ನು ಈಗ ಮನೆಗೆ ಕರೆದುಕೊಂಡು ಬಂದಿದ್ದೇವೆ. ನಮ್ಮ ಅಳಿಯ, ಅತ್ತೆ, ಬೀಗತಿ ,ಬೀಗರು ಅವರೆಲ್ಲಾ ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ಬ್ರಿಡ್ಜ್ ಮುರಿದು ಬಿದ್ದು ಆಕಡೆಗೆ ಈ ಕಡೆಗೆ ಯಾರೂ ವಾಪಸ್ ಬರಲೂ ಆಗ್ತಾ ಇಲ್ಲ, ಈ ಕಡೆಯಿಂದ ಆ ಕಡೆಗೆ ಯಾರೂ ಹೋಗಲೂ ಆಗುತ್ತಿಲ್ಲ. ಹೆಲಿಕ್ಯಾಪ್ಟರ್ ಕಳುಹಿಸಿ ಅವರನ್ನು ಸೇಫ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇಷ್ಟೊತ್ತಿನವರೆಗೂ ಹೆಲಿಕ್ಯಾಪ್ಟರ್ ಹೋಗಿಲ್ಲ. ಅಲ್ಲಿ ಕ್ಲೈಮೆಟ್ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ' ಎಂದು ವಿನೋದ್ ಅತ್ತೆ ಲಕ್ಷ್ಮಿ ಹೇಳಿದ್ದಾರೆ.
ಇದನ್ನೂ ಓದಿ :ವಯನಾಡ್ನಲ್ಲಿ ರಣಮಳೆಗೆ ಸರಣಿ ಭೂಕುಸಿತ: ಮಕ್ಕಳು ಸೇರಿ 120ಕ್ಕೇರಿದ ಸಾವಿನ ಸಂಖ್ಯೆ, 400ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಕಷ್ಟ - Wayanad Landslides