ಕರ್ನಾಟಕ

karnataka

ETV Bharat / state

ಜೆ ಜೆ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ - JJ NAGAR MURDER CASE

ಜೆ ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣದ ಆರೋಪಿಗಳಿಗೆ ಸಿಐಡಿ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Feb 11, 2025, 5:49 PM IST

ಬೆಂಗಳೂರು : ರಾಜಕೀಯ ವಲಯದಲ್ಲಿ ಸಾಕಷ್ಟು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಜೆ. ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಸಿಐಡಿ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಆರೋಪಿಗಳಾದ ಶಾಹೀದ್ ಪಾಶಾ ಅಲಿಯಾಸ್ ನ್ಯಾರೋ, ಶಾಹೀದ್ ಪಾಶಾ ಅಲಿಯಾಸ್ ಗೇಣಾ ಎಂಬಾತನಿಗೆ ಐಪಿಸಿ 304ರಡಿ ಅಪರಾಧಕ್ಕಾಗಿ 7 ವರ್ಷಗಳ ಶಿಕ್ಷೆ ಮತ್ತು ತಲಾ ರೂ. 10 ಸಾವಿರ ರೂ. ದಂಡ, ಐಪಿಸಿ 506ರಡಿ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ ಮತ್ತು ತಲಾ 5 ಸಾವಿರ ರೂ ದಂಡ ಹಾಗೂ ಐಪಿಸಿ 27 (1) ಆಯುಧ ಕಾಯ್ದೆಯ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ. 2022ರ ಏಪ್ರಿಲ್ 4 ರಂದು ರಾತ್ರಿ ಜೆ‌. ಜೆ ನಗರ ಠಾಣೆ ವ್ಯಾಪ್ತಿಯಲ್ಲಿ ವಿ. ಚಂದ್ರು ಎಂಬ ಯುವಕನ ಹತ್ಯೆ ನಡೆದಿತ್ತು.

ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಸ್ನೇಹಿತ ಸೈಮನ್ ರಾಜ್ ಜೊತೆ ಚಿಕನ್ ರೋಲ್ ತಿನ್ನಲು ಚಂದ್ರು ಹೊರಟಿದ್ದ. ಹಳೇಗುಡ್ಡದಹಳ್ಳಿ ಆರೋಪಿಗಳ ಬೈಕ್ ಹಾಗೂ ಸೈಮನ್ ರಾಜ್ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿತ್ತು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿತ್ತು.

ಸ್ನೇಹಿತನ ನೆರವಿಗೆ ಬಂದ ಚಂದ್ರು ಬಳಿ ಉರ್ದು ಮಾತನಾಡುವಂತೆ ಆರೋಪಿ ಶಾಹೀದ್ ಗಲಾಟೆ ಮಾಡಿದ್ದ. ನಂತರ ಅಲ್ಲಿಯೇ ಇದ್ದ ಶಾಹಿದ್‌ನ ಸ್ನೇಹಿತರು, ಸೈಮನ್ ಮತ್ತು ಚಂದ್ರುವಿನ ಮೇಲೆ ಮಾರಕಾಸ್ತ್ರ ಬೀಸಿದ್ದರು. ನಂತರ ಆರೋಪಿ ಶಾಹೀದ್ ತನ್ನ ಬಳಿಯಿದ್ದ ಚಂದ್ರುವಿನ ಬಲ ತೊಡೆಗೆ ಚುಚ್ಚಿ ಹತ್ಯೆಗೈದಿದ್ದ. ಸೈಮನ್ ರಾಜ್ ನೀಡಿದ್ದ ದೂರಿನನ್ವಯ ಜೆ. ಜೆ‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಂತರ ಪ್ರಕರಣ ಗಂಭೀರತೆ ಪಡೆಯುತ್ತಿದ್ದಂತೆ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.

ತನಿಖಾ ಕಾಲದಲ್ಲಿ 30 ಜನ ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಐಡಿ ಅಧಿಕಾರಿಗಳು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ :ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ, ಸದಸ್ಯರ ನೇಮಕಕ್ಕೆ ಸಮಿತಿ ರಚಿಸಿದ ಸರ್ಕಾರ: ಅರ್ಜಿ ಇತ್ಯರ್ಥ - CDRC

ABOUT THE AUTHOR

...view details