ಕರ್ನಾಟಕ

karnataka

ಸೂರಜ್​ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ - Suraj Revanna Case

By ETV Bharat Karnataka Team

Published : Jul 18, 2024, 9:10 PM IST

ಜೆಡಿಎಸ್​ ವಿಧಾನಪರಿಷತ್ ಸದಸ್ಯ ಸೂರಜ್​ ರೇವಣ್ಣ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.

suraj revanna
ಸೂರಜ್​ ರೇವಣ್ಣ (ETV Bharat)

ಬೆಂಗಳೂರು: ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್​ ವಿಧಾನಪರಿಷತ್ ಸದಸ್ಯ ಸೂರಜ್​ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರಕ್ಕೆ ಮುಂದೂಡಿದೆ.

ಜಾಮೀನು ಅರ್ಜಿಯ ವಿಚಾರಣೆಯನ್ನು 82ನೇ ಸೆಷನ್ಸ್ ನ್ಯಾಯಾಲಯವು (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಗುರುವಾರ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಆರೋಪಗಳಿಲ್ಲ. ವಿನಾಃಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅವರು ವಿಧಾನಪರಿಷತ್​ ಸದಸ್ಯರಾಗಿದ್ದು, ಕಾನೂನು ಪಾಲಕರಾಗಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ವೇಳೆ, ಸರ್ಕಾರದ ಪರ ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:ಹೊಳೆನರಸೀಪುರದಲ್ಲಿ ಘನ್ನಿಗಡ ಫಾರ್ಮ್ ಹೌಸ್​ಗೆ ಜೂನ್ 16ರಂದು ಕರೆಯಿಸಿಕೊಂಡು ಸೂರಜ್ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಹಣದ ಆಮಿಷವನ್ನೂ ಒಡ್ಡಿದ್ದರು ಎಂದು ಸಂತ್ರಸ್ತ ಯುವಕ ಸೂರಜ್ ಮತ್ತು ಅವರ ಬೆಂಬಲಿಗ ಶಿವಕುಮಾರ್ ವಿರುದ್ಧ ಜೂನ್ 22ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಹೊಳೆನರಸೀಪುರ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಸೂರಜ್ ಮತ್ತು ಶಿವಕುಮಾರ್ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್​ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸೂರಜ್ ಬಂಧನವಾಗಿದೆ.

ಮತ್ತೊಂದು ಪ್ರಕರಣದಲ್ಲಿ ಸೂರಜ್ ಆಪ್ತ ಎನ್ನಲಾದ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಸೂರಜ್, ಚನ್ನರಾಯಪಟ್ಟಣದ ರಕ್ಷಿತ್ ಮತ್ತು ಹಾಸನದ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್​ಗಳ ಅಡಿ ಜೂನ್ 25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸೂರಜ್ ತನ್ನ ಮೇಲೂ ಕೋವಿಡ್ ಲಾಕ್​ಡೌನ್​ ಸಂದರ್ಭದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಚೇತನ್ ವಿರುದ್ಧ ದೂರು ಕೊಡಿಸಲು ಸಚಿನ್, ರಕ್ಷಿತ್ ಮೂಲಕ ತನ್ನ ಮೇಲೆ ಒತ್ತಡ ಹೇರಿದ್ದಾರೆ. ಸೂರಜ್ ಪ್ರಭಾವಿ ಕುಟುಂಬದವರಾಗಿದ್ದು, ಕೊಲೆ ಮಾಡಿಸುವ ಭಯದಿಂದ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎಂದು ಶಿವಕುಮಾರ್ ದೂರಿನಲ್ಲಿ ವಿವರಿಸಿದ್ದಾರೆ. ಈ ಪ್ರಕರಣದಲ್ಲಿ ಸೂರಜ್ ನಿರೀಕ್ಷಣಾ ಜಾಮೀನು ಕೋರಿದ್ದಾರೆ.

ಪ್ರಜ್ವಲ್​ ರೇವಣ್ಣ ಅರ್ಜಿ ವಿಚಾರಣೆ ಸೋಮವಾರಕ್ಕೆ: ಇದೇ ವೇಳೆ, ಮಹಿಳೆಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ, ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಇದನ್ನೂ ಓದಿ:ವಾಲ್ಮೀಕಿ ನಿಗಮದ ಪ್ರಕರಣ: ED ಎದುರು ವಿಚಾರಣೆಗೆ ಹಾಜರಾದ ಬಸನಗೌಡ ದದ್ದಲ್ - Valmiki Corporation Scam

ABOUT THE AUTHOR

...view details