ಬೆಂಗಳೂರು: ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮಧ್ಯಾಹ್ನ 2.45ಕ್ಕೆ ಮೂಂದೂಡಿದೆ.
ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಚ್.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುತ್ತಿದ್ದಂತೆ ವಾದ ಆರಂಭಿಸಿದ ಎಸ್ಐಟಿ ತಂಡದ ಪರ ವಕೀಲ ಬಿ.ಎನ್.ಜಗದೀಶ್, ನಿರೀಕ್ಷಣಾ ಜಾಮೀನು ಸಂಬಂಧ ಆಕ್ಷೇಪಣೆ ಸಲ್ಲಿಸಲು ಸಮಾಯಾಕಾಶ ನೀಡಬೇಕು. ಅಪಹರಣ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಲಾಗಿದೆ. ಆತನಿಂದ ಕೆಲ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಬೇಕು ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು.