ಬೆಂಗಳೂರು: ಅಯೋಧ್ಯೆಯಿಂದ ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ರೈಲಿನಲ್ಲಿ ರಾಮಭಕ್ತರಿಗೆ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿ ಪ್ರಸ್ತಾಪವಾಯಿತು. ಸಭಾಪತಿ ಅನುಮತಿ ಪಡೆಯದೇ ವಿಷಯ ಪ್ರಸ್ತಾಪ ಮಾಡಿದ್ದರಿಂದಾಗಿ ಕೇವಲ ಪೀಠಿಕೆಗೆ ಮಾತ್ರ ವಿಷಯ ಸೀಮಿತವಾಗಿ ಮುಗಿಯಿತು.
ಶುಕ್ರವಾರ ವಿಧಾನ ಪರಿಷತ್ನ ಬೆಳಗಿನ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೊಸಪೇಟೆ ಘಟನೆ ಪ್ರಸ್ತಾಪಿಸಿದರು. ಅಯೋಧ್ಯೆಯಿಂದ ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ವಿಶೇಷ ರೈಲಿಗೆ ಹೊಸಪೇಟೆಯಲ್ಲಿ ವ್ಯಕ್ತಿಯೋರ್ವ ಹತ್ತಿದ್ದ. ಅಯೋಧ್ಯೆಗೆ ತೆರಳಿ ಹಿಂತಿರುಗುತ್ತಿದ್ದ ರಾಮಭಕ್ತರಿಗೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಮಾಡಲಾಗಿತ್ತು. ಎಲ್ಲಾ ರಾಮಭಕ್ತರು ಸೇರಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆದರೆ ಆರೋಪಿ ತಪ್ಪಿಸಿಕೊಂಡು ಹೋಗಿದ್ದಾನೆ. ಇದಕ್ಕೆ ಪೊಲೀಸರು ಹೇಗೆ ಅವಕಾಶ ಮಾಡಿಕೊಟ್ಟರು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಎಂದು ಕೇಳಿದರು. ಈ ಹಿಂದೆ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕೂಡ ಗೋಧ್ರಾ ಮಾದರಿ ಘಟನೆ ನಡೆಯುವ ಸಾಧ್ಯತೆಯ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೆಲ್ಲಾ ನೋಡಿದರೆ ಅನುಮಾನ ಬರುತ್ತಿದೆ ಎಂದು ಸದನದ ಗಮನಕ್ಕೆ ತಂದರು.
ಈ ವೇಳೆ ಪ್ರತಿಪಕ್ಷ ನಾಯಕರ ಪ್ರಸ್ತಾಪಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಗಳ ಅನುಮತಿ ಪಡೆಯದೇ ವಿಷಯ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಸಮರ ಕೂಡಾ ನಡೆಯಿತು. ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಸ್ಪೀಕರ್ ಬಸವರಾಜ್ ಹೊರಟ್ಟಿ ಸಮಾಧಾನ ಮಾಡಲು ಯತ್ನಿಸಿದರು. ಅಷ್ಟೇ ಅಲ್ಲ ಪ್ರಶ್ನೋತ್ತರ ಕಲಾಪಕ್ಕೂ ಮುನ್ನ ಯಾವುದೇ ಪ್ರಸ್ತಾಪಕ್ಕೆ ಅವಕಾಶವಿಲ್ಲ. ಅನುಮತಿ ಇಲ್ಲದೇ ಯಾವುದೇ ಪ್ರಸ್ತಾಪ ಮಾಡುವುದು ಕೂಡ ಸರಿಯಲ್ಲ. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಎಂದು ಕೋಟಾ ಶ್ರೀನಿವಾಸ ಪೂಜಾರಿಯವರ ಪ್ರಸ್ತಾಪವನ್ನು ಕೇವಲ ಪೀಠಿಕೆಗೆ ಸೀಮಿತಗೊಳಿಸಿ ಮುಕ್ತಾಯಗೊಳಿಸಿದರು. ಆ ಬಳಿಕ ಪ್ರಶ್ನೋತ್ತರ ಕಲಾಪ ಆರಂಭವಾಯ್ತು.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಗೂ ಆತನಿಂದ ಹೇಳಿಕೆ ಪಡೆದಿದ್ದಾರೆ. ಇನ್ನೊಂದು ಕಡೆ ಸ್ಥಳಕ್ಕೆ ಧಾವಿಸಿದ್ದ ವಿಜಯನಗರ ಎಸ್ಪಿ ಗದ್ದಲವನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೂ ವ್ಯವಸ್ಥೆ ಮಾಡಿಕೊಟ್ಟಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಕೇಂದ್ರದಿಂದ ರಾಜ್ಯಕ್ಕೆ 25,435 ಕೋಟಿ ಅನುದಾನ ಇಳಿಕೆ: ಹಣಕಾಸು ಆಯೋಗದ ವರದಿಯಲ್ಲಿ ವಿವರಣೆ